ದೇಶ

ಜಾನ್ ಬರ್ಲ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಿದ್ದು ಬಿಜೆಪಿ ಬಂಗಾಳ ವಿಭಜನೆಯನ್ನು ಬೆಂಬಲಿಸುವುದರ ಲಕ್ಷಣ: ತೃಣಮೂಲ ಕಾಂಗ್ರೆಸ್

Sumana Upadhyaya

ಕೋಲ್ಕತ್ತಾ; ಅಲಿಪುರ್ದೌರ್ ಕ್ಷೇತ್ರದ ಸಂಸದ ಜಾನ್ ಬರ್ಲ ಅವರನ್ನು ಕೇಂದ್ರ ಸಚಿವರನ್ನಾಗಿ ಬಡ್ತಿ ನೀಡಿರುವ ಕ್ರಮ ಬಿಜೆಪಿಯು ಪಶ್ಚಿಮ ಬಂಗಾಳದ ವಿಭಜನೆಯನ್ನು ಪ್ರೋತ್ಸಾಹಿಸುವ ಧೋರಣೆಯನ್ನು ತೋರಿಸುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದ್ದು ಅದನ್ನು ಬಿಜೆಪಿ ನಿರಾಕರಿಸಿದೆ.

ಪಶ್ಚಿಮ ಬಂಗಾಳದ ಬಿಜೆಪಿಯ ಪ್ರಮುಖ ನಾಯಕ ಬರ್ಲಾ ಇತ್ತೀಚೆಗೆ ಉತ್ತರ ಬಂಗಾಳವೆಂದು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಪಶ್ಚಿಮ ಬಂಗಾಳದಿಂದ ಬೇರ್ಪಡಿಸಬೇಕು, ಈ ಮೂಲಕ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದ್ದರು. ಅವರನ್ನು ನಿನ್ನೆ ಪ್ರಧಾನಿ ಮೋದಿಯವರು ಸಚಿವ ಸಂಪುಟ ಪುನಾರಚನೆ ವೇಳೆ ಸಚಿವರನ್ನಾಗಿ ಸೇರ್ಪಡೆ ಮಾಡಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವರನ್ನಾಗಿ ನೇಮಕ ಮಾಡಿದ್ದಾರೆ.

ಬರ್ಲ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿರುವ ಬಿಜೆಪಿಯ ನಡೆ ಪಶ್ಚಿಮ ಬಂಗಾಳವನ್ನು ಪ್ರತ್ಯೇಕಿಸಲು ಅದು ಪ್ರೋತ್ಸಾಹಿಸುತ್ತದೆ ಎಂಬ ಮನೋಭಾವವನ್ನು ತೋರಿಸುತ್ತದೆ. ಈ ಬಗ್ಗೆ ಕೇಸರಿಪಡೆ ಸ್ಪಷ್ಟ ನಿಲುವು ತೋರಿಸಬೇಕು. ಕಳೆದ ಎರಡು ವರ್ಷಗಳಿಂದ ಬರ್ಲ ಅವರು ಪಶ್ಚಿಮ ಬಂಗಾಳದ ವಿಭಜನೆಗೆ ಒತ್ತಾಯಿಸುತ್ತಿದ್ದಾರೆ. ಸಂಸತ್ತಿನಲ್ಲಿ ಅವರು ಒಂದು ವಿಷಯದ ಬಗ್ಗೆ ಸರಿಯಾಗಿ ಮಾತನಾಡುವುದನ್ನು ನೋಡಿಲ್ಲ. ಹೀಗಿರುವಾಗ ಅವರು ಕೊಟ್ಟಿರುವ ಖಾತೆಗೆ ನ್ಯಾಯ ಹೇಗೆ ಸಲ್ಲಿಸುತ್ತಾರೆ ಎಂದು ಟಿಎಂಸಿ ನಾಯಕ ಸೌಗತ ರಾಯ್ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ಟಿಎಂಸಿಯ ಆರೋಪ ಆಧಾರರಹಿತವಾಗಿದ್ದು ರಾಜ್ಯದ ವಿಭಜನೆಯನ್ನು ಬಿಜೆಪಿ ಪಕ್ಷ ಬೆಂಬಲಿಸುವುದಿಲ್ಲ. ಪಶ್ಚಿಮ ಬಂಗಾಳದ ವಿಭಜನೆಯನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಜಾನ್ ಬರ್ಲ ಅವರು ಸಚಿವರಾದರೆ ಜನಪರ ಕೆಲಸಗಳನ್ನು ಇನ್ನಷ್ಟು ಮಾಡಬಹುದು ಎಂದು ಪ್ರಧಾನಿ ಮತ್ತು ಪಕ್ಷದ ವರಿಷ್ಠರು ತೀರ್ಮಾನಿಸಿ ಸಂಪುಟಕ್ಕೆ ಸೇರಿಸಿದ್ದಾರೆ ಎಂದರು.

SCROLL FOR NEXT