ದೇಶ

ಭಾರತದಲ್ಲಿ ಕೆಲಸ ಮಾಡುವವರು ಇಲ್ಲಿನ ನಿಯಮಗಳನ್ನು ಪಾಲಿಸಬೇಕು: ಟ್ವಿಟರ್ ಗೆ ನೂತನ ಐಟಿ ಸಚಿವರ ಎಚ್ಚರಿಕೆ

Nagaraja AB

ನವದೆಹಲಿ: ಹೊಸ ಐಟಿ ನಿಯಮಗಳ ಅನುಸರಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವಣ ವಿವಾದ ವೇರ್ಪಟ್ಟಿರುವಂತೆಯೇ ನೂತನ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ದೇಶದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವವರು ಇಲ್ಲಿನ ಕಾನೂನುಗಳನ್ನು ಪಾಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಜೊತೆಗಿನ ಸಭೆ ನಂತರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಭಾರತದಲ್ಲಿ ವಾಸಿಸುವವರು ಮತ್ತು ಕೆಲಸ ಮಾಡುವವರು ಈ ದೇಶದ ಕಾನೂನುಗಳನ್ನು ಪಾಲಿಸಬೇಕಾಗುತ್ತದೆ ಎಂದರು.

ಒಡಿಶಾದ ಸಂಸದರಾಗಿರುವ ವೈಷ್ಣವ್, ಬುಧವಾರ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರೈಲ್ವೆ ಜೊತೆಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಜವಾಬ್ದಾರಿಯನ್ನು ಅವರು ಹೊತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಜೀವನ ಮಟ್ಟ ಸುಧಾರಣೆಗಾಗಿ ಹೆಚ್ಚಿನ ಗಮನ ಹರಿಸುವುದಾಗಿ ಅವರು ಹೇಳಿದ್ದಾರೆ. 

ದೇಶದಲ್ಲಿನ ಹೊಸ ಕಾನೂನುಗಳನ್ನು ಅನುಸರಿಸದ ಆರೋಪ ಅಮೆರಿಕಾ ಮೂಲದ ಟ್ವಿಟರ್ ಕಂಪನಿ ಮೇಲಿದೆ. ಪ್ರಮುಖ ಮೂರು ಹುದ್ದೆಗಳ ನೇಮಕ ಸೇರಿದಂತೆ ನೂತನ ಐಟಿ ನಿಯಮಗಳ ಅನುಸರಣೆ ಕಡ್ಡಾಯವಾಗಿದೆ. ಜೂನ್ 26ರಿಂದಲೂ ನೂತನ ಐಟಿ ನಿಯಮಗಳು ಜಾರಿಗೆ ಬಂದಿದ್ದರೂ ಸರ್ಕಾರದಿಂದ ಪದೇ ಪದೇ ಎಚ್ಚರಿಕೆ ಬಂದರೂ ಕೂಡಾ ಟ್ವಿಟರ್ ನೂತನ ನಿಯಮಗಳನ್ನು ಪಾಲಿಸುತ್ತಿಲ್ಲ.

SCROLL FOR NEXT