ದೇಶ

'ಹಣಕ್ಕಾಗಿ ಜೀವದ ಜೊತೆ ಚೆಲ್ಲಾಟ': ನಕಲಿ 'ರೆಮ್ಡೆಸಿವಿರ್' ಪ್ರಕರಣದ ಆರೋಪಿಗಳಿಗೆ ಜಾಮೀನು ನಕಾರ

Srinivasamurthy VN

ನವದೆಹಲಿ: ಹಣಕ್ಕಾಗಿ ಜೀವದ ಜೊತೆ ಚೆಲ್ಲಾಟವಾಡಿದ್ದೀರಿ ಎಂದು ಕಿಡಿಕಾರಿದ ದೆಹಲಿ ಕೋರ್ಟ್ ನಕಲಿ 'ರೆಮ್ಡೆಸಿವಿರ್' ಪ್ರಕರಣದ ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ.

ಕೊರೋನಾ ಚಿಕಿತ್ಸೆಯಲ್ಲಿ ಬಳಸಲಾಗುವ ರೆಮ್ಡೆಸಿವಿರ್‌ ಚುಚ್ಚುಮದ್ದಿಗೆ ಎರಡನೇ ಅಲೆ ವೇಳೆ ಹೆಚ್ಚಿನ ಬೇಡಿಕೆಯಿತ್ತು. ಇದೇ ಸಂದರ್ಭದಲ್ಲಿ ನಕಲಿ ರೆಮ್ಡೆಸಿವಿರ್ ಇಂಜೆಕ್ಷನ್ ಹೊಂದಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿಗೆ ಜಾಮೀನು ನೀಡಲು ದೆಹಲಿ ನ್ಯಾಯಾಲಯ ಶನಿವಾರ ನಿರಾಕರಿಸಿದೆ. ಕೊರೋನಾದ  ಗಂಭೀರ ಸ್ಥಿತಿಯಲ್ಲಿ ಈ ಔಷಧಿಯ ತುರ್ತು ಅಗತ್ಯವಿರುವ ರೋಗಿಗಳ ಜೀವದೊಂದಿಗೆ ಆರೋಪಿಗಳು ಚೆಲ್ಲಾಟವಾಡಲು ಪ್ರಯತ್ನಿಸಿದ್ದಾರೆ ಎಂದು ಕಿಡಿಕಾರಿದ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತು.

ಏಪ್ರಿಲ್ 30 ರಂದು ನಡೆದಿದ್ದ ಅಧಿಕಾರಿಗಳ ದಾಳಿಯ ಸಂದರ್ಭದಲ್ಲಿ ಆರೋಪಿ ಕಾರ್ತಿಕ್ ಗಾರ್ಗ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ರೆಮ್ಡೆಸಿವಿರ್ ಚುಚ್ಚುಮದ್ದಿನ ಏಳು ಬಾಟಲುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಅದನ್ನು ಪರಿಶೀಲಿಸಿದ ಅಧಿಕಾರಿಗಳಿಗೆ ಅದು ನಕಲಿ ಚುಚ್ಚುಮದ್ದು ಎಂದು ತಿಳಿದುಬಂದಿದತ್ತು. ಈ  ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420 (ಮೋಸ), 188, ಮತ್ತು 34 ಮತ್ತು ಅಗತ್ಯ ಸರಕುಗಳ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 

ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವೀಂದರ್ ಬೇಡಿ ಅವರು, ಆರೋಪಿ ಕಾರ್ತಿಕ್ ವಿರುದ್ಧದ ಆರೋಪ ಗಂಭೀರವಾಗಿದ್ದು, ಕೊರೋನಾದ ಗಂಭೀರ ಸ್ಥಿತಿಯಲ್ಲಿ ಈ ಔಷಧಿಯ ತುರ್ತು ಅಗತ್ಯವಿರುವ ರೋಗಿಗಳ ಜೀವದೊಂದಿಗೆ ಆರೋಪಿಗಳು ಚೆಲ್ಲಾಟವಾಡಲು  ಪ್ರಯತ್ನಿಸಿದ್ದಾರೆ. ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹೇಳಿದರು.

ಅಂತೆಯೇ ಆರೋಪಿಗಳು ಮಾಡಿದ ಅಪರಾಧಗಳಿಗೆ ಭಾರತೀಯ ದಂಡ ಸಂಹಿತೆ ಅಥವಾ ಸಾಂಕ್ರಾಮಿಕ ಕಾಯ್ದೆಯಡಿ ಮಾತ್ರವಲ್ಲ, ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ಶಿಕ್ಷೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

SCROLL FOR NEXT