ದೇಶ

'ಕೋವಿಡ್ ನೆಗೆಟಿವ್ ವರದಿ ಕಡ್ಡಾಯ': ಪ್ರವಾಸಿ ತಾಣಗಳಲ್ಲಿ ಕಠಿಣ ನಿಯಮಗಳ ಜಾರಿಗೊಳಿಸಿದ ಉತ್ತರಾಖಂಡ ಸರ್ಕಾರ

Srinivasamurthy VN

ಡೆಹ್ರಾಡೂನ್: ಮಸ್ಸೂರಿ ಮತ್ತು ನೈನಿತಾಲ್ ನಂತಹ ಜನಪ್ರಿಯ ತಾಣಗಳಲ್ಲಿ ಪ್ರವಾಸಿಗರು ಹೆಚ್ಚುತ್ತಿರುವ ಕಾರಣ ಕೋವಿಡ್ ಸೋಂಕು ಹರಡುವ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಉತ್ತರಾಖಂಡ ಸರ್ಕಾರ ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಿಗೆ  ಭೇಟಿ ನೀಡುವವರಿಗೆ ಆದೇಶಿಸಿದೆ.

ಈ ಕುರಿತಂತೆ ಆದೇಶ ಹೊರಡಿಸಿರುವ ಉತ್ತರಾಖಂಡ ಸರ್ಕಾರ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರು ಕನಿಷ್ಠ 72 ಗಂಟೆಗಳಿಗಿಂತ ಹಳೆಯದಾದ ಕೋವಿಡ್-19 ನೆಗೆಟಿವ್ ಪರೀಕ್ಷಾ ವರದಿಯನ್ನು ಕಡ್ಡಾಯವಾಗಿ ತೋರಿಸಬೇಕಿದೆ. ಅಲ್ಲದೆ ರಾಜ್ಯದ ಎಲ್ಲಾ ಪ್ರವಾಸಿಗರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ  ಪಾಲಿಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಲು ಡೆಹ್ರಾಡೂನ್, ನೈನಿತಾಲ್ ಮತ್ತು ಇತರ ಜಿಲ್ಲೆಗಳ ಜಿಲ್ಲಾ ನ್ಯಾಯಾಧೀಶರು ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಮುಸ್ಸೂರಿ, ಕೆಂಪ್ಟಿ ಫಾಲ್, ನೈನಿತಾಲ್, ಹರಿದ್ವಾರ ಮತ್ತು ರಿಷಿಕೇಶದಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅಲ್ಲದೆ ಪ್ರವಾಸಿಗರು ಸಾಮಾಜಿಕ ಅಂತರ ಮರೆತು, ಮಾಸ್ಕ್ ಇಲ್ಲದೇ, ಯಾವುದೇ ರೀತಿಯ ಕೋವಿಡ್ ನಿಯಮಗಳನ್ನು  ಅನುಸರಿಸದೇ ಪ್ರವಾಸಿ ತಾಣಗಳಲ್ಲಿ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಈ ಕುರಿತ ಹಲವಾರು ವಿಡಿಯೊಗಳು ವೈರಲ್ ಆಗುತ್ತಿದೆ.

ಈ ಕುರಿತು ಮಾತನಾಡಿರುವ ಡೆಹ್ರಾಡೂನ್ ಡಿಎಂ ಆಶಿಶ್ ಶ್ರೀವಾಸ್ತವ್ ಅವರು, 'ಜನರು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುತ್ತಿಲ್ಲ ಎಂದು ನಾವು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳ ಮೂಲಕ ತಿಳಿದುಕೊಂಡಿದ್ದೇವೆ. ಅವರು ಮಾಸ್ಕ್ ಗಳನ್ನು ಧರಿಸುತ್ತಿಲ್ಲ ಅಥವಾ ಯಾವುದೇ ಸಾಮಾಜಿಕ  ದೂರವನ್ನು ಕಾಯ್ದುಕೊಳ್ಳುತ್ತಿಲ್ಲ. ಇದು ಕಳವಳಕಾರಿ ವಿಷಯ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಮುಸ್ಸೂರಿಯ ಸರ್ಕಲ್ ಅಧಿಕಾರಿ ನರೇಂದ್ರ ಪಂತ್ ಅವರು, 'ಮುಸ್ಸೂರಿಗೆ ಬರುವ ಪ್ರವಾಸಿಗರನ್ನು ಸ್ಮಾರ್ಟ್ ಸಿಟಿ ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆಯೇ ಮತ್ತು ಅವರೊಂದಿಗೆ ನಕಾರಾತ್ಮಕ ಕೋವಿಡ್ ಪರೀಕ್ಷಾ ವರದಿಯನ್ನು ಹೊಂದಿದ್ದಾರೆಯೇ ಎಂದು ಕುಥಾಲ್ ಗೇಟ್‌ನಲ್ಲಿ  ಪರೀಕ್ಷಿಸಲಾಗುತ್ತಿದೆ. ನೆಗೆಟಿವ್ ವರದಿ ಇಲ್ಲದವರನ್ನು ಅಲ್ಲಿಯೇ ನಿಲ್ಲಿಸಿ ವಾಪಸ್ ಕಳುಹಿಸಲಾಗುತ್ತಿದೆ ಎಂದು ಹೇಳಿದರು.

ಅಂತೆಯೇ ಪ್ರವಾಸಿ ತಾಣಗಳಲ್ಲಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತಿದೆ. ಅಲ್ಲದೆ ಜಲಪಾತಗಳ ಬಳಿ ಯಾವುದೇ ಪ್ರವಾಸಿಗರೂ 30 ನಿಮಿಷಗಳಿಗಿಂತ ಹೆಚ್ಚು ಸಮಯ ಇರಬಾರದು ಎಂದು ಸೂಚಿಸಲಾಗಿದೆ.  ನಿಯಮ ಪಾಲನೆ ನಿಮಿತ್ತ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ  ನಿಯೋಜಿಸಲಾಗಿದೆ. ಕಳೆದ ವಾರಾಂತ್ಯಕ್ಕೆ ಹೋಲಿಸಿದರೆ ಈ ವಾರಾಂತ್ಯದಲ್ಲಿ ಮಸ್ಸೂರಿಯಲ್ಲಿನ ನಿರ್ಬಂಧಗಳಿಂದಾಗಿ ಪ್ರವಾಸಿಗರ ಆಗಮನ ಶೇಕಡಾ 50 ರಷ್ಟು ಕುಸಿದಿದೆ ಎಂದು ಅವರು ಹೇಳಿದರು.

SCROLL FOR NEXT