ದೇಶ

ಐಎಸ್ಐಎಸ್ ಸಿದ್ಧಾಂತದ ಪ್ರಚಾರ: ಕಾಶ್ಮೀರದಲ್ಲಿ ಎನ್ಐಎ ಶೋಧಕಾರ್ಯ

Srinivas Rao BV

ಕಾಶ್ಮೀರದಲ್ಲಿ ನಿಷೇಧಿತ ಐಎಸ್ಐಎಸ್ ಉಗ್ರ ಸಂಘಟನೆಯ ಸಿದ್ಧಾಂತದ ಪ್ರಚಾರದ ಸಂಬಂಧ ಎನ್ಐಎ ಜು.11 ರಂದು ಹಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿತು.

ಶ್ರೀನಗರ, ಅನಂತ್ ನಾಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆದಿದೆ. 

ಭಾರತದಲ್ಲಿ ಪ್ರಭಾವಶಾಲಿ ಯುವಕರನ್ನು ಐಎಸ್ಐಎಸ್ ಉಗ್ರ ಸಂಘಟನೆಗೆ ಸೇರಿಸಿಕೊಂಡು ತೀವ್ರಗಾಮಿಗಳನ್ನಾಗಿಸುವುದಕ್ಕಾಗಿ ಸಂಚು ರೂಪಿಸಿ ಇಸೀಸ್ ಉಗ್ರ ಸಂಘಟನೆಯ ಸಿದ್ಧಾಂತದ ಪ್ರಚಾರವನ್ನು ಮಾಡುತ್ತಿದ್ದರ ಬಗ್ಗೆ ಜೂ.29 ರಂದು ಪ್ರಕರಣವೊಂದು ದಾಖಲಾಗಿತ್ತು.

ಭಾರತದಲ್ಲಿ ಜಿಹಾದ್ ಗೆ ಕರೆ ನೀಡುವುದು ಈ ಪ್ರಚಾರದ ಪ್ರಮುಖ ಉದ್ದೇಶವಾಗಿತ್ತು ಎಂದು ಎನ್ಐಎ ಹೇಳಿದೆ.

ಭಾರತದಲ್ಲಿ ಯುವಕರನ್ನು ತನ್ನತ್ತ ಸೆಳೆಯುವುದಕ್ಕಾಗಿ ತಿರುಚಿದ ಅಂಶಗಳು, ಕಪೋಲಕಲ್ಪಿತ ಅನ್ಯಾಯಗಳು ಹಾಗೂ ಇನ್ನಿತರ ಭಾರತ ವಿರೋಧಿ ಅಂಶಗಳಿಂದ ಕೂಡಿದ ನಿರೂಪಣೆಯೊಂದಿಗೆ ಆನ್ ಲೈನ್ ಪ್ರಚಾರ ನಿಯತಕಾಲಿಕೆ ವಾಯ್ಸ್ ಆಫ್ ಹಿಂದ್ (ವಿಒಹೆಚ್) ನ್ನು ಮಾಸಿಕವಾಗಿ ಪ್ರಕಟಿಸಲಾಗುತ್ತಿತ್ತು ಈ ಮೂಲಕ ಭಾರತದಲ್ಲಿನ ಯುವಕರಿಗೆ ಪರಕೀಯತೆಯ ಭಾವನೆ ಹಾಗೂ ಕೋಮುದ್ವೇಷವನ್ನು ಹರಡಲು ಯತ್ನಿಸಲಾಗುತ್ತಿತ್ತು ಎಂದು ಎನ್ಐಎ ವಕ್ತಾರರು ಹೇಳಿದ್ದಾರೆ.

ತನ್ನ ಅತಿ ಮಾರಕವಾದ ಯೋಜನೆಯನ್ನು ಜಾರಿಗೊಳಿಸಲು ಸಂಘಟಿತ ಅಭಿಯಾನವನ್ನು ಸೈಬರ್ ಸ್ಪೇಸ್ ಮೂಲಕ ನಡೆಸಲಾಗುತ್ತಿತ್ತು, ಇದು ತಳಮಟ್ಟದಲ್ಲಿ ಭಯೋತ್ಪಾದಕ ಆರ್ಥಿಕ ಚಟುವಟಿಕೆಗಳಿಂದ ಸಹಕಾರ ಪಡೆಯುತ್ತಿತ್ತು ಎಂದೂ ಎನ್ಐಎ ಹೇಳಿದೆ.

ನಕಲಿ ಆನ್ ಲೈನ್ ಗುರುತುಗಳನ್ನಿಟ್ಟುಕೊಂಡು ಐಎಸ್ಐಎಸ್ ಕೇಡರ್ ಗಳು ಕಾರ್ಯನಿರ್ವಹಣೆ ಮಾಡುತ್ತಿದ್ದರು. ಈ ಸಂಬಂಧ ನಡೆದ ಶೋಧ ಕಾರ್ಯಾಚರಣೆಯಲ್ಲಿ ಹಲವು ಮಹತ್ವದ ದಾಖಲೆಗಳು, ಡಿಜಿಟಲ್ ಡಿವೈಸ್ ಗಳು, ಫೋನ್, ಹಾರ್ಡ್ ಡಿಸ್ಕ್, ಐಎಸ್ಐಎಸ್ ಲೋಗೋಗಳನ್ನು ಹೊಂದಿದ ಟಿ-ಶರ್ಟ್ ಗಳು, ಲ್ಯಾಪ್ ಟಾಪ್ ಗಳು, ಟ್ಯಾಬ್ ಲೆಟ್ ಗಳನ್ನು ವಶಕ್ಕೆ ಪಡೆಯಲಾಗಿದೆ.
 

SCROLL FOR NEXT