ದೇಶ

ಕಂದಹಾರ್ ನಲ್ಲಿನ ಭಾರತೀಯ ರಾಯಭಾರಿ ಕಚೇರಿ ಮುಚ್ಚಲಾಗಿಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

Manjula VN

ನವದೆಹಲಿ: ಅಫ್ಘಾನಿಸ್ತಾನದ ಕಂದಹಾರ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಮುಚ್ಚಲಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ. 

ಆಫ್ಗಾನಿಸ್ತಾನದ ಪಶ್ಚಿಮ ಭಾಗದ ಬಹುತೇಕ ಭಾಗವನ್ನು ವಶಪಡಿಸಿಕೊಂಡಿರುವ ತಾಲಿಬಾನ್‌, ದಕ್ಷಿಣ ಭಾಗದ ಪ್ರದೇಶಗಳನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಬೆನ್ನಲ್ಲೇ ಭಾರತ ತನ್ನ ರಾಯಭಾರಿ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚುವ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿತ್ತು. 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. 

ಕಂದಹಾರ್ ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅನ್ನು ಮುಚ್ಚಲಾಗಿಲ್ಲ. ಆದಾಗ್ಯೂ, ಕಂದಹಾರ್ ನಗರದ ಸಮೀಪ ನಡೆಯುತ್ತಿರುವ ತೀವ್ರ ಹೋರಾಟದಿಂದಾಗಿ ಭಾರತ ಮೂಲದ ಸಿಬ್ಬಂದಿಯನ್ನು ಸದ್ಯಕ್ಕೆ ಮರಳಿ ಕರೆತರಲಾಗಿದೆ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಬಿಗಡಾಯಿಸುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ.  ನಮ್ಮ ಸಿಬ್ಬಂದಿಗಳ ಸುರಕ್ಷತೆ ಹಾಗೂ ಭದ್ರತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಕಂದಹಾರ್ ನಗರದ ಸಮೀಪ ನಡೆಯುತ್ತಿರುವ ತೀವ್ರ ಹೋರಾಟದಿಂದಾಗಿ ಭಾರತ ಮೂಲದ ಸಿಬ್ಬಂದಿಯನ್ನು ಸದ್ಯಕ್ಕೆ ಮರಳಿ ಕರೆತರಲಾಗಿದೆ. ಪರಿಸ್ಥಿತಿ ಸ್ಥಿರಗೊಳ್ಳುವ ತನಕ ಇದು ಸಂಪೂರ್ಣ ತಾತ್ಕಾಲಿಕ ಕ್ರಮ ಎಂದು ನಾನು ಒತ್ತಿ ಹೇಳಲು ಬಯಸುತ್ತೇನೆಂದು ತಿಳಿಸಿದ್ದಾರೆ. 

ರಾಯಭಾರಿ ಕಚೇರಿ ನಮ್ಮ ಸ್ಥಳೀಯ ಸಿಬ್ಬಂದಿ ಸದಸ್ಯರ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಅರಿಂದಮ್ ಬಾಗ್ಚಿ ಹೇಳಿದ್ದಾರೆ. 

SCROLL FOR NEXT