ದೇಶ

ಪಾಕ್ ನ ಐಎಸ್‌ಐಗೆ ರಹಸ್ಯ ದಾಖಲೆಗಳನ್ನು ರವಾನಿಸುತ್ತಿದ್ದ ಭಾರತೀಯ ಯೋಧನ ಬಂಧನ

Vishwanath S

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಧೆಗೆ ವರ್ಗೀಕೃತ ದಾಖಲೆಗಳನ್ನು ಒದಗಿಸಿದ ಆರೋಪದ ಮೇಲೆ ಯೋಧ ಸೇರಿದಂತೆ ಇಬ್ಬರನ್ನು ಅಧಿಕೃತ ರಹಸ್ಯ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನದ ಪೋಖ್ರಾನ್ ಆರ್ಮಿ ಬೇಸ್ ಕ್ಯಾಂಪ್ ನಲ್ಲಿ 34 ವರ್ಷದ ತರಕಾರಿ ಸರಬರಾಜುದಾರನನ್ನು ದೆಹಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು ಈ ವೇಳೆ ಸೇನೆಯ ವ್ಯಕ್ತಿಯೊಬ್ಬರಿಂದ ಸೂಕ್ಷ್ಮ ದಾಖಲೆಗಳನ್ನು ಪಡೆದು ಐಎಸ್ಐಗೆ ಒದಗಿಸಿದ್ದಾಗಿ ಬಾಯ್ಬಿಟ್ಟಿರುವುದಾಗಿ ವರದಿಯಾಗಿದೆ. 

ರಕ್ಷಣೆಗೆ ಸಂಬಂಧಿಸಿದ ಕೆಲವು ಸೂಕ್ಷ್ಮ ದಾಖಲೆಗಳನ್ನು ಪತ್ತೇದಾರಿ ಜಾಲದ ಮೂಲಕ ನೆರೆಯ ದೇಶಕ್ಕೆ ಕಳುಹಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರ ಅಪರಾಧ ಶಾಖೆಗೆ ಮಾಹಿತಿ ಸಿಕ್ಕಿತು. ಈ ಹಿನ್ನೆಲೆಯಲ್ಲಿ ಆರ್ಮಿ ಬೇಸ್ ಕ್ಯಾಂಪ್ ಗೆ ತರಕಾರಿ ಸರಬರಾಜು ಮಾಡುತ್ತಿದ್ದ ಹಬೀಬ್ ಖಾನ್ ಅಲಿಯಾಸ್ ಹಬೀಬುಲ್ ರೆಹಮಾನ್ ಎಂಬಾತನನ್ನು ಬಂಧಿಸಲಾಗಿತ್ತು. 

ಬಂಧನದ ವೇಳೆ ಆತನ ಮನೆಯಲ್ಲಿ ಕೆಲವು ರಹಸ್ಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕೃತ ರಹಸ್ಯ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ವಿಶೇಷ ಪೊಲೀಸ್ ಆಯುಕ್ತ (ಅಪರಾಧ) ಪ್ರವೀರ್ ರಂಜನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತನಿಖೆ ವೇಳೆ, ಸೇನೆಯ ಯೋಧ ಪರಮ್ ಜಿತ್ ಜೊತೆ ಸಂಪರ್ಕ ಹೊಂದಿರುವುದು ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಪರಮ್ ಜಿತ್ ಹಣಕ್ಕಾಗಿ ದೇಶದ ಸೂಕ್ಷ್ಮ ಮಾಹಿತಿಯನ್ನು ಒದಗಿಸುತ್ತಿದ್ದಾನೆ ಎಂಬ ವಿಚಾರವನ್ನು ಹಬೀಬ್ ತಿಳಿಸಿದ್ದ. ಈ ಹಿನ್ನಲೆಯಲ್ಲಿ ಪರಮ್ ಜಿತ್ ನನ್ನು ಪೊಲೀಸರು ಬಂಧಿಸಿದ್ದಾರೆ. 

SCROLL FOR NEXT