ದೇಶ

ವ್ಯಾಜ್ಯ ಪರಿಹಾರಕ್ಕೆ ಮಧ್ಯಸ್ಥಿಕೆಯೇ ಮೊದಲ ಹೆಜ್ಜೆಯಾಗಬೇಕು: ಸಿಜೆಐ ಎನ್ ವಿ ರಮಣ

Srinivasamurthy VN

ನವದೆಹಲಿ: ವ್ಯಾಜ್ಯ ಪರಿಹಾರಕ್ಕೆ ಮಧ್ಯಸ್ಥಿಕೆಯೇ ಮೊದಲ ಹೆಜ್ಜೆಯಾಗಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ- ಸಿಂಗಾಪುರ ಮಧ್ಯಸ್ಥಿಕೆ ಶೃಂಗ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ದೇಶದ ಮೂರು ಹಂತದ ನ್ಯಾಯ ವ್ಯವಸ್ಥೆಯಲ್ಲಿ 4.5 ಕೋಟಿ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ವ್ಯಾಜ್ಯಗಳನ್ನು ಬಗೆಹರಿಸಲು ಮಧ್ಯಸ್ಥಿಕೆಯನ್ನು ಮೊದಲ ಹೆಜ್ಜೆಯಾಗಿ ಕಡ್ಡಾಯಪಡಿಸಬೇಕು. ಈ ನಿಟ್ಟಿನಲ್ಲಿ ಕಾನೂನು  ರೂಪಿಸುವ ಅಗತ್ಯವಿದೆ ಎಂದು ಹೇಳಿದರು. 

'ಮಧ್ಯಸ್ಥಿಕೆಯ ವ್ಯಾಪ್ತಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಮಿಷನ್ ಮೋಡ್ ಪ್ರವೇಶಿಸಲು ಭಾರತಕ್ಕೆ ಇದು ಸಕಾಲ. ಮಧ್ಯಸ್ಥಿಕೆಯನ್ನು ಅಗ್ಗದ ಹಾಗೂ ವೇಗದ ವ್ಯಾಜ್ಯ ನಿರ್ಣಯ ವ್ಯವಸ್ಥೆಯಾಗಿ ಜನಪ್ರಿಯ ಗಳಿಸಲು ಅಭಿಯಾನ ಆರಂಭಿಸಬೇಕು. ಮಧ್ಯಸ್ಥಿಕೆಯನ್ನು ಮೊದಲ ಹೆಜ್ಜೆಯಾಗಿ ಕಡ್ಡಾಯಪಡಿಸುವ ಕ್ರಮ,  ಮಧ್ಯಸ್ಥಿಕೆಯನ್ನು ಪ್ರಚುರಪಡಿಸುವಲ್ಲಿ ಮಹತ್ವದ್ದಾಗಲಿದೆ. ಬಹುಶಃ ಈ ನಿಟ್ಟಿನಲ್ಲಿ ಸಾರ್ವತ್ರಿಕ ಕಾನೂನನ್ನು ಜಾರಿಗೆ ತರುವುದು ಅಗತ್ಯ ಎಂದು ಹೇಳಿದರು.

ಸಾರ್ವಜನಿಕರಿಗೆ ಮಧ್ಯಸ್ಥಿಕೆ ಸೌಲಭ್ಯ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು ಹಾಗೂ ಇದನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಎಲ್ಲ ವ್ಯಾಜ್ಯ ನಿರ್ಣಯದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಎನ್ ವಿ ರಮಣ ಅವರು ಸಲಹೆ ಮಾಡಿದರು.

ಭಾರತದಲ್ಲಿ ಬಹುಪಾಲು ದಾವೆ ಹೂಡುವವರು ಸಮಾಜದ ಮಧ್ಯಮ ಮತ್ತು ಬಡ ವರ್ಗಗಳಿಗೆ ಸೇರಿದವರು ಎಂಬ ಅಂಶವನ್ನು ನಾವು ಗಮನಿಸಬೇಕು. ಪರಿಹಾರದ ವಿಶ್ವಾಸಾರ್ಹ ಸಾಧನವಾಗಿ ಮಧ್ಯಸ್ಥಿಕೆ ಸ್ಥಾಪನೆಯಾದರೆ ಅವರು ಉತ್ತಮ ಸಾಂತ್ವನವನ್ನು ಪಡೆಯುತ್ತಾರೆ. ನಿಯಮಿತ ನ್ಯಾಯಾಲಯಗಳಿಗೆ ತಲುಪುವ  ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಗೆ ಇದು ಕಾರಣವಾಗುತ್ತದೆ. ಅಂತಹ ಸನ್ನಿವೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
 

SCROLL FOR NEXT