ದೇಶ

ಬಂಧನದಿಂದ ತಪ್ಪಿಸಲು ಮುಂಬೈ ಪೊಲೀಸರಿಗೆ ರಾಜ್ ಕುಂದ್ರಾ 25 ಲಕ್ಷ ರೂ. ಲಂಚ: ಎಸಿಬಿ

Vishwanath S

ಮುಂಬೈ: ಅಶ್ಲೀಲ ಚಿತ್ರ ತಯಾರಿಕೆಗೆ ಸಂಬಂಧ ಬಂಧನಕ್ಕೊಳಗಾಗಿರುವ ಉದ್ಯಮಿ ಮತ್ತು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನವನ್ನು ತಪ್ಪಿಸಲು ಪೊಲೀಸ್ ಅಧಿಕಾರಿಗಳಿಗೆ 25 ಲಕ್ಷ ರೂ. ಲಂಚ ನೀಡಿದ್ದಾರೆ ಎಂದು ಆರೋಪಿಸಿ ನಾಲ್ಕು ಇಮೇಲ್ ಗಳು ಬಂದಿವೆ ಎಂದು ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತಿಳಿಸಿದೆ.

ಎಸಿಬಿ ಅಧಿಕಾರಿಯೊಬ್ಬರ ಪ್ರಕಾರ, ಅಶ್ಲೀಲ ಪ್ರಕರಣದ ಮತ್ತೋರ್ವ ಆರೋಪಿ ಯಶ್ ಠಾಕೂರ್ ಇಮೇಲ್ ಗಳನ್ನು ಕಳುಹಿಸಿದ್ದಾರೆ. ಅವನಿಂದಲೂ ಇದೇ ರೀತಿ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದ್ದಾನೆ. ಆರೋಪಗಳು ಅಸ್ಪಷ್ಟ ಸ್ವರೂಪದಲ್ಲಿರುವುದರಿಂದ ಮುಂದಿನ ಕ್ರಮಕ್ಕಾಗಿ ಮುಂಬೈ ಪೊಲೀಸರಿಗೆ ಕಳುಹಿಸಲಾಗಿದೆ ಎಂದರು.

'ಈ ವಿಷಯವಾಗಿ ಯಶ್ ಠಾಕೂರ್ ರಿಂದ ನಾಲ್ಕು ಇಮೇಲ್ಗಳು ಬಂದಿವೆ ಎಂದು ಎಸಿಬಿ ಮಹಾರಾಷ್ಟ್ರ ದೃಢಪಡಿಸಿದೆ. ಮೇಲ್ ಗಳನ್ನು ಏಪ್ರಿಲ್ 30, 2021ರಂದು ಮುಂಬೈ ಪೊಲೀಸರಿಗೆ ಮುಂದಿನ ಕ್ರಮಕ್ಕೆ ರವಾನಿಸಲಾಗಿದೆ ಎಂದು ಎಸಿಬಿ ಅಧಿಕಾರಿ ಖಚಿತಪಡಿಸಿದ್ದಾರೆ.

ಅಶ್ಲೀಲ ಚಿತ್ರಗಳನ್ನು ನಿರ್ಮಿಸಿ ಮತ್ತು ಕೆಲವು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಪ್ರಕಟಿಸಿದ ಆರೋಪದ ಮೇಲೆ ಕುಂದ್ರಾ ಮತ್ತು ಇತರ 11 ಮಂದಿಯನ್ನು ಸೋಮವಾರ ರಾತ್ರಿ ಮುಂಬೈ ಪೊಲೀಸ್ ಅಪರಾಧ ಶಾಖೆ ಬಂಧಿಸಿತ್ತು.

ಸಿನಿಮಾಗಳು, ವೆಬ್ ಸರಣಿಗಳಲ್ಲಿ ಅವಕಾಶ ನೀಡುವ ಹೆಸರಿನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿ, ಬಲವಂತದಿಂದ ಅಶ್ಲೀಲ ಸಿನಿಮಾಗಳನ್ನು ತೆಗೆದಿದ್ದಾನೆ ಎಂದು ಅವರ ವಿರುದ್ದ ಆರೋಪಗಳು ಕೇಳಿಬರುತ್ತಿವೆ. ಈ ಸಂಬಂಧ ರೂಪದರ್ಶಿ, ನಟಿ ಸಾಗರಿಕಾ ಸೋನಾ ಸುಮನ್ ಆರೋಪಿಸಿದ್ದರು.

SCROLL FOR NEXT