ದೇಶ

ಗುರು ಪೂರ್ಣಿಮಾ: ದೇಶದ ಜನತೆಗೆ ಪ್ರಧಾನಿ ಮೋದಿ ಶುಭಾಶಯ

Manjula VN

ನವದೆಹಲಿ: ದೇಶದಾದ್ಯಂತ ಗುರು ಪೂರ್ಣಿಮಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ಕೋರಿದ್ದಾರೆ. 

ಗುರು ಪೂರ್ಣಿಮಾ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

‘ಗುರು’ ಎಂಬ ಪದವು ಸಂಸ್ಕೃತ ಭಾಷೆಯಿಂದ ಬಂದಿದೆ. ‘ಗು’ ಎಂದರೆ ಕತ್ತಲೆ ಮತ್ತು ‘ರು’ ಎಂದರೆ ದೂರ ಮಾಡು ಎಂದರ್ಥ. ಅಂದರೆ ಕತ್ತಲೆಯನ್ನು ತೊರೆದು ಜೀವನದುದ್ದಕ್ಕೂ ಸಂತೋಷವೇ ಬೆಳಗಲಿ ಎಂದರ್ಥ. ಸಾಂಪ್ರದಾಯಿಕವಾಗಿ ಈ ದಿನವನ್ನು ಭಾರತ, ನೇಪಾಳ ಮತ್ತು ಭೂತಾನ್‌ನಲ್ಲಿ ಹಿಂದೂಗಳು, ಬೌದ್ಧರು ಮತ್ತು ಜೈನರು ಆಚರಿಸುತ್ತಾರೆ. 

ಗುರು ಪೂರ್ಣಿಮವನ್ನು ಬುದ್ಧ ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಪ್ರತಿ ವರ್ಷ ಹಿಂದೂ ಕ್ಯಾಲೆಂಡರ್ ಪ್ರಕಾರ ಆಷಾಢ ತಿಂಗಳಲ್ಲಿ ಪೂರ್ಣಿಮಾ ಅಂದರೆ ಹುಣ್ಣಿಮೆಯ ದಿನದಂದು ಬರುತ್ತದೆ.

ಜೀವನದ ಪ್ರತಿ ಹಂತದಲ್ಲೂ ತಿದ್ದಿ ನಡೆಸಿದ ಗುರು ಹಿರಿಯರಿಗಾಗಿ ಈ ದಿನನ್ನು ಸಮರ್ಪಿಸಲಾಗುತ್ತದೆ. ಜತೆಗೆ ಈ ದಿನದಂದು ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ ಶುಭ್ರ ವಸ್ತ್ರ ತೊಟ್ಟು ಗರುಗಳ ಆಶಿರ್ವಾದ ಪಡೆದುಕೊಳ್ಳುವ ಪದ್ಧತಿ ಮೊದಲಿನಿಂದಲೂ ಬಂದಿದೆ. 

ಅನೇಕರು ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸಲು ಉಪವಾಸ ಮಾಡುತ್ತಾರೆ. ಜತೆಗೆ ಹಣ್ಣುಗಳನ್ನು, ಸಿಹಿ ತಿಂಡಿಗಳನ್ನು ಶಿಕ್ಷಕರಿಗೆ ನೀಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಗುರು ಪೂರ್ಣಿಮಾ ವಿಶೇಷ ದಿನದಂದು  ನಮ್ಮ ಏಳಿಗೆಯನ್ನು ಬಯಸಿದ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸೋಣ.

SCROLL FOR NEXT