ದೇಶ

ಸಂಸತ್ತಿನಲ್ಲಿ ಗದ್ದಲ: ಅಸಹಾಯಕರಾಗುತ್ತಿದ್ದೇವೆ ಎಂದ ವೆಂಕಯ್ಯ ನಾಯ್ಡು; ರಾಜ್ಯಸಭೆ, ಲೋಕಸಭೆ ಕಲಾಪ ಮುಂದೂಡಿಕೆ

Srinivasamurthy VN

ನವದೆಹಲಿ: ಪೆಗಾಸಸ್‌, ನೂತನ ಕೃಷಿ ಕಾಯ್ದೆ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳ ಗದ್ದಲ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಅವರು ತೀವ್ರ ಅಸಮಾಧಾನಗೊಂಡಿದ್ದು, ನಾವು ಅಸಹಾಯಕರಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ಸದಸ್ಯರು ಪೆಗಾಸಸ್‌, ನೂತನ ಕೃಷಿ ಕಾಯ್ದೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಗದ್ದಲ ಉಂಟಾದ ಪರಿಣಾಮ ಕಲಾಪವನ್ನು ಮಧ್ಯಾಹ್ನ 2 ಗಂಟೆವರೆಗೆ ಮಂದೂಡಲಾಗಿದೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಇತರ ಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟಿಸಿದರೆ, ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಸ್ಪೀಕರ್‌ ಪೀಠದ ಮುಂಭಾಗಕ್ಕೆ ತೆರಳಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇದಕ್ಕೂ ಮೊದಲು 1999ರ ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಗೌರವ ನಮನ ಸಲ್ಲಿಸಲಾಯಿತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಅವರನ್ನು ಅಭಿನಂದಿಸಲಾಯಿತು.

ಅಸಹಾಯಕರಾಗುತ್ತಿದ್ದೇವೆ ಎಂದ ವೆಂಕಯ್ಯ ನಾಯ್ಡು
ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಿದ ಸಭಾಧ್ಯಕ್ಷ ಎಂ.ವೆಂಕಯ್ಯನಾಯ್ಡು, ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಚರ್ಚಿಸದಂತೆ ಸದಸ್ಯರನ್ನು ತಡೆಯಲಾಗಿದೆ. ದಿನದಿಂದ ದಿನಕ್ಕೆ ನಾವು ಅಸಹಾಯಕರಾಗುತ್ತಿದ್ದೇವೆ’ ಎಂದರು. ಲೋಕಸಭೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಕಲಾಪ  ನಡೆದಿದ್ದು, ಪ್ರಶ್ನೋತ್ತರ ಅವಧಿಯಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಬಳಿಕ ಸ್ಪೀಕರ್‌ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಿದರು.
 

SCROLL FOR NEXT