ದೇಶ

ಸಮೂಹ ರೋಗನಿರೋಧಕತೆಯ ಸನಿಹದಲ್ಲಿ ಬಿಹಾರ

Srinivas Rao BV

ಪಾಟ್ನ: ಬಿಹಾರದಲ್ಲಿ ಕೊರೋನಾಗೆ ಸಮೂಹ ರೋಗನಿರೋಧಕತೆ ಪ್ರಮಾಣ ಉತ್ತಮವಾಗಿ ಅಭಿವೃದ್ಧಿಯಾಗುತ್ತಿರುವುದು ಸೆರೋಸರ್ವೇ ಮೂಲಕ ದೃಢಪಟ್ಟಿದೆ. 

ಮಧುಬನಿ, ಪುರ್ನಿಯಾ, ಬೆಗುಸರಾಯ್, ಮುಜಾಫರ್ ಪುರ, ಅರ್ವಾಲ, ಬಕ್ಸರ್ ಗಳಲ್ಲಿ ನಡೆದ ಸೆರೋಸರ್ವೇಯಲ್ಲಿ ಸಾಮಾನ್ಯ ಜನತೆ ಹಾಗೂ ಆರೋಗ್ಯ ಕಾರ್ಯಕರ್ತರಲ್ಲಿ ಉತ್ತಮ ರೀತಿಯಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗುತ್ತಿರುವುದು ಕಂಡುಬಂದಿದೆ. 

ಇದು ನಾಲ್ಕನೇ ಸುತ್ತಿನ ಸೆರೋಸರ್ವೇಯಾಗಿದ್ದು, ಗಂಗಾ ನದಿಯಲ್ಲಿ ಗುರುತು ಸಿಗದ 91 ಮೃತದೇಹಗಳು ತೇಲಿ ಆತಂಕ ಮೂಡಿಸಿದ್ದ ಬಕ್ಸರ್ ಜಿಲ್ಲೆಯಲ್ಲಿ ಸಾಮಾನ್ಯ ಜನತೆಯಲ್ಲಿ ಅತಿ ಹೆಚ್ಚು ಪ್ರಮಾಣದ-ಶೇ.83.8 ರಷ್ಟು ಪ್ರತಿಕಾಯಗಳು ಉತ್ಪತ್ತಿಯಾಗಿದ್ದರೆ ಆರೋಗ್ಯ ಕಾರ್ಯಕರ್ತರಲ್ಲಿ ಶೇ.94.1 ರಷ್ಟು ಪ್ರತಿಕಾಯಗಳು ಉತ್ಪತ್ತಿಯಾಗಿದೆ. 

ಮಧುಬನಿಯಲ್ಲಿ 424 ಮಂದಿಯಿಂದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು,  ಶೇ.77.1 ರೊಂದಿಗೆ ಅತಿ ಹೆಚ್ಚು ಸಮೂಹ ರೋಗನಿರೋಧಕತೆ ಹೊಂದಿರುವ ಎರಡನೇ ನಗರವಾಗಿದೆ. ಬೆಗುಸರಾಯ್ ನಲ್ಲಿ ಶೇ.93 ರಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ರೋಗನಿರೋಧಕತೆ ಪತ್ತೆಯಾಗಿದ್ದು, ಈ ವಿಭಾಗದಲ್ಲಿ ಅತಿ ಹೆಚ್ಚು ಸಮೂಹ ರೋಗನಿರೋಧಕತೆ ಹೊಂದಿರುವ ಎರಡನೇ ನಗರವಾಗಿದೆ.  

ಬಿಹಾರದಲ್ಲಿ ಸೆರೋಪಾಸಿಟಿವಿಟಿ ಹೆಚ್ಚು ವರದಿಯಾಗಿದ್ದು, ರಾಷ್ಟ್ರೀಯ ಜನಸಂಖ್ಯೆಯಲ್ಲಿನ ಹೋಲಿಕೆ ಮಾಡಿದಲ್ಲಿ ಬಿಹಾರದ ಸೆರೋಪಾಸಿಟಿವಿಟಿ ಹೆಚ್ಚು ಅಭಿವೃದ್ಧಿಯಾಗಿದೆ. ದೇಶದಲ್ಲಿ ಸೆರೋಪಾಸಿಟಿವಿಟಿ ಪ್ರಮಾಣ ಶೇ.67.6 ರಷ್ಟಿದ್ದರೆ, ಬಿಹಾರದಲ್ಲಿ ಶೇ.73 ರಷ್ಟಿದೆ. 

SCROLL FOR NEXT