ದೇಶ

ಭಯೋತ್ಪಾದನೆ, ಆಮೂಲಾಗ್ರೀಕರಣ, ಉಗ್ರರಿಗೆ ಹಣಕಾಸು ನಿಗ್ರಹಕ್ಕೆ ಕಾರ್ಯತಂತ್ರವನ್ನು ಅಂತಿಮಗೊಳಿಸಿದ ಬ್ರಿಕ್ಸ್!

Nagaraja AB

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರ ಗುಂಪಿನ ಸಭೆಯಲ್ಲಿ  ಭಯೋತ್ಪಾದನೆ, ಆಮೂಲಾಗ್ರೀಕರಣ ಮತ್ತು ಉಗ್ರರಿಗೆ ಹಣಕಾಸು ನಿಗ್ರಹಕ್ಕೆ ಬ್ರಿಕ್ಸ್ ರಾಷ್ಟ್ರಗಳ ನಡುವೆ ಫಲಿತಾಂಶ ಆಧಾರಿತ ಸಹಕಾರ ಬಲಪಡಿಸುವ ಉದ್ದೇಶದೊಂದಿಗೆ ಕಾರ್ಯ ಯೋಜನೆಯೊಂದನ್ನು  ಅಳವಡಿಸಿಕೊಳ್ಳಲಾಗುತ್ತಿದೆ.

ಜುಲೈ 28 ಮತ್ತು 29 ರಂದು ವರ್ಚುಯಲ್ ನಲ್ಲಿ ನಡೆದ ಬ್ರಿಕ್ಸ್ ಭಯೋತ್ಪಾದನೆ ನಿಗ್ರಹ ಗುಂಪಿನ ಸಭೆಯಲ್ಲಿ ಕಾರ್ಯತಂತ್ರವನ್ನು ಅಂತಿಮಗೊಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.

 ಭಾರತದ ಅಧ್ಯಕ್ಷತೆಯಲ್ಲಿ ನಡೆದ ಬ್ರಿಕ್ಸ್ ಸಭೆಯಲ್ಲಿ ಬ್ರಿಕ್ಸ್ ಭಯೋತ್ಪಾದನಾ ನಿಗ್ರಹ ಕಾರ್ಯತಂತ್ರ ರೂಪಿಸಲಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಎಂಇಎ ಹೇಳಿದೆ.

ಬ್ರಿಕ್ಸ್ (ಭ್ರಜಿಲ್-ರಷ್ಯಾ-ಇಂಡಿಯಾ-ಚೀನಾ- ದಕ್ಷಿಣ ಆಫ್ರಿಕಾ) ವಿಶ್ವದ ಐದು ಅತಿದೊಡ್ಡ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತದೆ. ಶೇ.41 ರಷ್ಟು ಜಾಗತಿಕ ಜನಸಂಖ್ಯೆ, ಶೇ 24 ರಷ್ಟು ಜಿಡಿಪಿ ಮತ್ತು ಶೇ. 16 ರಷ್ಟು ಜಾಗತಿಕ ವ್ಯಾಪಾರವನ್ನು ಪ್ರತಿನಿಧಿಸುತ್ತದೆ.

SCROLL FOR NEXT