ದೇಶ

'ಕುರಿ, ಕೋಳಿ, ಮೀನು ಮಾಂಸಕ್ಕಿಂತ ಗೋಮಾಂಸ ಹೆಚ್ಚು ಸೇವಿಸಿ'; ಮೇಘಾಲಯ ಬಿಜೆಪಿ ಸಚಿವ!

Srinivasamurthy VN

ಶಿಲ್ಲಾಂಗ್: ಕುರಿ, ಕೋಳಿ ಮತ್ತು ಮೀನಿನ ಮಾಂಸಕ್ಕಿಂತ ಹೆಚ್ಚು ಗೋವಿನ ಮಾಂಸವನ್ನು ಸೇವಿಸುವಂತೆ ಮೇಘಾಲಯ ಸಚಿವ ಸಣ್ಬೂರ್‌ ಶುಲ್ಲೈ ಹೇಳಿದ್ದಾರೆ.

ಮೇಘಾಲಯದ ಬಿಜೆಪಿ ಹಿರಿಯ ನಾಯಕ ಹಾಗೂ ಸ್ವತಃ ಪಶು ಸಂಗೋಪನೆ ಮತ್ತು ಪಶು ವೈದ್ಯ ಖಾತೆ ಸಚಿವರಾಗಿರುವ ಸಣ್ಬೂರ್‌ ಶುಲ್ಲೈ ಅವರು, ಕುರಿ, ಕೋಳಿ ಮತ್ತು ಮೀನಿನ ಮಾಂಸಕ್ಕಿಂತ ಹೆಚ್ಚು ಗೋವಿನ ಮಾಂಸವನ್ನು ಸೇವಿಸುವಂತೆ ಕರೆ ನೀಡಿದ್ದಾರೆ. 

'ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವ ಪ್ರತಿಯೊಬ್ಬರೂ, ತಮಗೆ ಇಷ್ಟವಾದ ಆಹಾರವನ್ನು ಸೇವಿಸಲು ಸ್ವತಂತ್ರರು. ಜನರಿಗೆ ಗೋಮಾಂಸ ಸೇವಿಸಲು ಉತ್ತೇಜಿಸುವ ಮೂಲಕ, ತಮ್ಮ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರುತ್ತದೆ ಎಂಬ ಜನರಲ್ಲಿರುವ ಆತಂಕವನ್ನು ದೂರ ಮಾಡಲು ಮುಂದಾಗಿದೆ ಎಂದು  ಹೇಳಿದರು,

ಅಲ್ಲದೆ ನೆರೆಯ ರಾಜ್ಯ ಅಸ್ಸಾಂನಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. ಆ ಹೊಸ ಕಾನೂನಿಂದ ಮೇಘಾಲಯಕ್ಕೆ ಜಾನುವಾರ ಸಾಗಣೆ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದರು.

ಇದೇ ವೇಳೆ ಮೇಘಾಲಯ ಮತ್ತು ಅಸ್ಸಾಂ ನಡುವಿನ ಗಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಗಡಿ ಮತ್ತು ಜನರನ್ನು ರಕ್ಷಿಸಲು ರಾಜ್ಯವು ತನ್ನ ಪೊಲೀಸ್ ಪಡೆಯನ್ನು ಬಳಸಿಕೊಳ್ಳುವ ಸಮಯ ಬಂದಿದೆ. ಅಸ್ಸಾಂನ ಜನರು ಗಡಿ ಪ್ರದೇಶದಲ್ಲಿ ನಮ್ಮ ಜನರಿಗೆ ಕಿರುಕುಳ ನೀಡುತ್ತಿದ್ದರೆ, ನಾವು ಪ್ರತಿಕ್ರಿಯಿಸಬೇಕು,  ಮತ್ತು ಸ್ಥಳದಲ್ಲೇ ತಿರುಗೇಟು ನೀಡಬೇಕು. ನಮ್ಮ ಜನರನ್ನು ರಕ್ಷಿಸುವ ಮನೋಭಾವ ನಮ್ಮಲ್ಲಿರಬೇಕು, ನಾವು ನಮ್ಮ ಬಲವನ್ನು ಬಳಸಿಕೊಳ್ಳಬೇಕು. ಅಸ್ಸಾಂ ಪೊಲೀಸರೊಂದಿಗೆ ಮಾತನಾಡಲು ಪೊಲೀಸರು ಮುಂದಕ್ಕೆ ಬರಬೇಕು ಎಂದು ಹೇಳಿದರು.

ಕಳೆದ ವಾರವಷ್ಟೇ ಬಿಜೆಪಿಯ ಹಿರಿಯ ನಾಯಕ ಶುಲ್ಲೈ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬಳಿಕ ಅವರಿಗೆ ಪಶು ಸಂಗೋಪನೆ ಮತ್ತು ಪಶು ವೈದ್ಯ ಖಾತೆ ನೀಡಲಾಗಿತ್ತು.
 

SCROLL FOR NEXT