ದೇಶ

ಮೇ ತಿಂಗಳಲ್ಲಿ ಅಹ್ಮದ್‌ನಗರದಲ್ಲಿ 9900ಕ್ಕೂ ಹೆಚ್ಚು ಅಪ್ರಾಪ್ತರಿಗೆ ಕೋವಿಡ್-19 ಪಾಸಿಟಿವ್!

Nagaraja AB

ಅಹ್ಮದ್ ನಗರ:  ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿ ಕಳೆದ ತಿಂಗಳು ಸುಮಾರು 9900ಕ್ಕೂ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಕೊರೋನಾವೈರಸ್ ದೃಢಪಟ್ಟಿದೆ. ಆದರೆ, ಅವರಲ್ಲಿ ಶೇ. 95 ರಷ್ಟು ಮಂದಿ ರೋಗಲಕ್ಷಣ ರಹಿತರಾಗಿದ್ದು, ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಈ ವರ್ಷದ ಮೇ ತಿಂಗಳಲ್ಲಿ ಒಟ್ಟಾರೇ 86,182 ಕೋವಿಡ್-19 ಕೇಸ್ ಗಳು ಅಹ್ಮದ್ ನಗರದಲ್ಲಿ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಬೊಸಾಲೆ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ 9928 ಸೋಂಕಿತರು ಅಪ್ರಾಪ್ತರು ( 18 ವರ್ಷಕ್ಕಿಂತ ಕೆಳಗಿನವರು) ಕಳೆದ ತಿಂಗಳಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ. 11.5 ರಷ್ಟಿದೆ. 9,928 ಸೋಂಕಿತರ ಪೈಕಿ, 6,700 ಅಪ್ತಾಪ್ತರು 11ರಿಂದ 18 ವರ್ಷದೊಳಗಿನವರು, 3,100 ಸೋಂಕಿತರು 1 ರಿಂದ 10 ವರ್ಷದೊಳಗಿನವರಾಗಿದ್ದಾರೆ. ಕೆಲವರು 1 ವರ್ಷಕ್ಕಿಂತ ಕೆಳಗಿನ ವಯಸ್ಸಿನವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಸೋಂಕು ದೃಢಪಟ್ಟಿರುವ ಮಕ್ಕಳಲ್ಲಿ ಶೇ.95 ರಷ್ಟು ಮಂದಿ ಲಕ್ಷಣ ರಹಿತರಾಗಿದ್ದು, ಆತಂಕ ಪಡಬೇಕಾಗಿಲ್ಲ. ಆದಾಗ್ಯೂ, ಸಂಭಾವ್ಯ ಮೂರನೇ ಅಲೆ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ 350 ರಿಂದ 370 ರೋಗಿಗಳು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆ ಪೈಕಿ ಕೇವಲ ಐದು ಅಥವಾ ಆರು ಮಕ್ಕಳಿದ್ದಾರೆ. ಸೋಮವಾರ 1 ಸಾವಿರ ಹೊಸ ಪ್ರಕರಣ ವರದಿಯಾಗಿದ್ದು, ಅದರಲ್ಲಿ 97 ಮಂದಿ ಅಪ್ರಾಪ್ತರು ಎಂದು ಅಹ್ಮದ್ ನಗರ ಮಕ್ಕಳ ಕಾರ್ಯಪಡೆ ಸದಸ್ಯ ಡಾ. ಸಚಿನ್ ಸೊಲಟ್ ಹೇಳಿದ್ದು, ಪೋಷಕರಿಂದ ಅಥವಾ ಕುಟುಂಬದ ಇತರ ವಯಸ್ಕ ಸದಸ್ಯರಿಂದ ಹೆಚ್ಚಿನ ಮಕ್ಕಳಿಗೆ ಸೋಂಕು ಹರಡಿರುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT