ದೇಶ

ಬಿಜೆಪಿ ಆಂತರಿಕ ಜಗಳ ಜಗಜ್ಜಾಹೀರು: ರಾಜಸ್ಥಾನದ ಹೊಸ ಬಿಜೆಪಿ ಪೋಸ್ಟರ್‌ಗಳಲ್ಲಿ ವಸುಂಧರಾ ರಾಜೆ ಮಿಸ್ಸಿಂಗ್!

Vishwanath S

ಜೈಪುರ: ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಾಕಲಾಗಿರುವ ಹೊಸ ಹೋರ್ಡಿಂಗ್‌ನಿಂದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಫೋಟೋಗಳು ಕಾಣೆಯಾಗಿವೆ. 

ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಸತೀಶ್ ಪೂನಿಯಾ ಮತ್ತು ಪ್ರತಿಪಕ್ಷದ ನಾಯಕ ಗುಲಾಬ್‌ಚಂದ್ ಕಟಾರಿಯಾ ಅವರ ಫೋಟೋಗಳಿವೆ ಆದರೆ ವಸುಂಧರಾ ರಾಜೆಯವರ ಫೋಟೋ ಸ್ಪಷ್ಟವಾಗಿ ಕಾಣೆಯಾಗಿದೆ.

ಹೊಸ ಪೋಸ್ಟರ್‌ನಲ್ಲಿ ಅಮಿತ್ ಷಾ ಅವರ ಫೋಟೋ ಕೂಡ ಕಾಣೆಯಾಗಿದೆ. ಇದಕ್ಕೂ ಮುನ್ನ ಪಕ್ಷದ ಪ್ರಧಾನ ಕಚೇರಿಯಲ್ಲಿ ಹಾಕಲಾಗಿದ್ದ ಹೋರ್ಡಿಂಗ್‌ನಲ್ಲಿ ಮಾಜಿ ಸಿಎಂ ವಸುಂಧರಾ ರಾಜೆ ಮತ್ತು ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಅವರೊಂದಿಗೆ ಸತೀಶ್ ಪೂನಿಯಾ ಮತ್ತು ಗುಲಾಬ್‌ಚಂದ್ ಕಟಾರಿಯಾ ಅವರ ಫೋಟೋಗಳು ಇದ್ದವು. ಅಲ್ಲದೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ರಾಷ್ಟ್ರೀಯ ನಾಯಕರ ಫೋಟೋಗಳು ಇದ್ದವು.

ರಾಜಸ್ತಾನದ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಹಾರಾಣಾ ಪ್ರತಾಪ್ ಬಗ್ಗೆ ಗುಲಾಬ್ ಚಂದ್ ಕಟಾರಿಯಾ ಕಾಮೆಂಟ್ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಕರ್ಣಿ ಸೇನೆ ಕಾರ್ಯಕರ್ತರು ಏಪ್ರಿಲ್ 13ರಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಾಕಲಾಗಿದ್ದ ಮುಖ್ಯ ಹೋರ್ಡಿಂಗ್‌ನಲ್ಲಿ ಗುಲಾಬ್‌ಚಂದ್ ಕಟಾರಿಯಾ ಅವರ ಫೋಟೋ ಮೇಲೆ ಶಾಯಿ ಚೆಲ್ಲಿದ್ದರು. 

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವ ವಸುಂಧರಾ ರಾಜೆ ಅವರ ಫೋಟೋ ಸಂಗ್ರಹದಲಿಲ್ಲದಿರುವುದು ರಾಜ್ಯ ಕೇಸರಿ ಶಿಬಿರದೊಳಗಿನ ಆಂತರಿಕ ಜಗಳ ಜಗಜ್ಜಾಹೀರು ಆಗಿದ್ದು ರಾಜಕೀಯ ವಲಯಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

SCROLL FOR NEXT