ದೇಶ

ದೆಹಲಿ ಗಲಭೆ ಪ್ರಕರಣ: ಜೆಎನ್'ಯು ವಿದ್ಯಾರ್ಥಿ ನತಾಶಾ ನರ್ವಾಲ್, ದೇವಂಗನಾ ಕಲಿತಾಗೆ ಜಾಮೀನು ಮಂಜೂರು

Manjula VN

ನವದೆಹಲಿ: ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಪಟ್ಟಿದ್ದ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ವಿದ್ಯಾರ್ಥಿಗಳಾದ ನತಾಶಾ ನರ್ವಾಲ್ ಮತ್ತು ದೇವಂಗನಾ ಕಲಿತಾ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಲಯದ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ದೆಹಲಿ ಹೈಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ.

ಈ ಮೂವರು ವಿದ್ಯಾರ್ಥಿಗಳನ್ನು ಕಳೆದ ವರ್ಷ ಮೇ ತಿಂಗಳಲ್ಲಿ ‘ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ‘ ಅಡಿ ಪೊಲೀಸರು ಬಂಧನಕ್ಕೊಳಪಡಿಸಲಾಗಿತ್ತು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಜಾಮೀನು ನೀಡಲು ವಿಚಾರಣಾ ನ್ಯಾಯಾಲಯ ನಿರಾಕರಿಸಿತ್ತು. ಈ ಆದೇಶದ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅನೂಪ್ ಜೈರಾಮ್ ಬಂಭಾನಿ ಅವರನ್ನೊಳಗೊಂಡ ನ್ಯಾಯಪೀಠ, ಮೂವರು ಆರೋಪಿಗಳಿಗೆ ಜಾಮೀನು ನೀಡಿದೆ.

ಜಾಮೀನು ನೀಡುವ ವೇಳೆ ನ್ಯಾಯಾಲಯ, ಪಿಂಜ್ರಾ ಟೊಡ್‌ ಸಂಘಟನೆಯ ಕಾರ್ಯಕರ್ತರಾಗಿರುವ ನರ್ವಾಲಾ ಮತ್ತು ಕಾಳಿತಾ ಮತ್ತು ತನ್ಹಾ ಅವರಿಗೆ ತಮ್ಮ ಪಾಸ್‌ಪೋರ್ಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿತು. ಜೊತೆಗೆ, ಸಾಕ್ಷ್ಯಗಳನ್ನು ಪ್ರಚೋದಿಸಬಾರದು ಮತ್ತು ನಾಶ ಮಾಡಬಾರದು ಎಂದು ಸೂಚಿಸಿತು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಬೆಂಬಲಿಸುವವರು ಮತ್ತು ವಿರೋಧಿಸುವವರ ನಡುವೆ ಫೆಬ್ರುವರಿ 24ರಂದು ನಡೆದಿದ್ದ ಘರ್ಷಣೆ ಹಿಂಸಾಚಾರ ಸ್ವರೂಪ ಪಡೆದುಕೊಂಡಿತ್ತು. ‌ಹಿಂಸಾಚಾರದಲ್ಲಿ 53 ಮಂದಿ ಸಾವಿಗೀಡಾಗಿದ್ದರು ಮತ್ತು 200 ಮಂದಿ ಗಾಯಗೊಂಡಿದ್ದರು.

SCROLL FOR NEXT