ದೇಶ

ಪ್ರಚೋದನಾಕಾರಿ ಭಾಷಣ: ಕೋಲ್ಕತಾ ಪೊಲೀಸರಿಂದ ನಟ ಮಿಥುನ್ ಚಕ್ರವರ್ತಿ ವಿಚಾರಣೆ

Shilpa D

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ನಡೆಸಿದ ಭಾಷಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ಹಾಗೂ ಬಿಜೆಪಿ ಮುಖಂಡ ಮಿಥುನ್ ಚಕ್ರವರ್ತಿ ಅವರನ್ನು ಕೋಲ್ಕತಾ ಪೊಲೀಸರು ಬುಧವಾರ ವಿಚಾರಣೆಗೆ ಒಳಪಡಿಸಿದ್ದಾರೆ.

ಪುಣೆಯಲ್ಲಿರುವ ಮಿಥುನ್ ಚಕ್ರವರ್ತಿ ಅವರನ್ನು ಉತ್ತರ ಕೊಲ್ಕೋತಾದ ಮಣಿಕ್ತಲಾ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ್ದಾರೆ. 

ಏಪ್ರಿಲ್- ಮೇ ತಿಂಗಳಲ್ಲಿ ಎಂಟು ಹಂತಗಳವರೆಗೆ ನಡೆದ ಚುನಾವಣೆಯಲ್ಲಿ ಮಿಥುನ್ ಚಕ್ರವರ್ತಿ ಅವರು ಬಿಜೆಪಿಯ ತಾರಾ ಪ್ರಚಾರಕರಲ್ಲಿ ಒಬ್ಬರಾಗಿದ್ದರು. ಅವರು ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಹೇಳಿಕೆಯು ಚುನಾವಣೆ ಬಳಿಕದ ಹಿಂಸಾಚಾರದಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದು ಆರೋಪಿಸಲಾಗಿತ್ತು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಮಿಥುನ್ ಚಕ್ರವರ್ತಿ ಅವರು ಕೊಲ್ಕೊತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಅವರನ್ನು ತನಿಖಾಧಿಕಾರಿಯೊಬ್ಬರು ಆನ್‌ಲೈನ್ ಮೂಲಕ ವಿಚಾರಣೆ ನಡೆಸಬೇಕು ಎಂದು ಕೋರ್ಟ್ ಸೂಚನೆ ನೀಡಿತ್ತು.

ಮಾರ್ಚ್ 7 ರಂದು ನಡೆದ ಚುನಾವಣಾ ರ್ಯಾಲಿಯಲ್ಲಿ 'ನಾನು ನಾಗರಹಾವು. ಒಮ್ಮೆ ಕಚ್ಚಿದರೆ ಸಾಕು' ಎಂದು ವಿರೋಧಿಗಳಿಗೆ ಮಾತಿನ ಬಾಣ ಬಿಟ್ಟಿದ್ದಾರೆ. ನಿನಗೆ ಇಲ್ಲಿ ಹೊಡೆದರೆ, ನಿನ್ನ ದೇಹ ಚಿತಾಗಾರದಲ್ಲಿ ಹೋಗಿ ಬೀಳುತ್ತದೆ' ಎಂಬ ತಮ್ಮದೇ ಸಿನಿಮಾ ಸಂಭಾಷಣೆಯನ್ನು ಅವರು ಹೇಳಿದ್ದರು.

ತಾವು ಪ್ರಚಾರದ ವೇಳೆ ಸಿನಿಮಾ ಡೈಲಾಗ್‌ಗಳನ್ನು ಮಾತ್ರವೇ ಉಚ್ಚರಿಸಿದ್ದಾಗಿ ಮತ್ತು ಅವುಗಳು ಯಾವುದೇ ನಿರ್ದಿಷ್ಟ ಅರ್ಥ ಬಿಂಬಿಸುತ್ತಿರಲಿಲ್ಲ ಎಂದು ಚಕ್ರವರ್ತಿ ಪ್ರತಿಪಾದಿಸಿದ್ದರು. ಆದರೆ ಇದು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಹೇಳಿಕೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.

SCROLL FOR NEXT