ದೇಶ

ನಂದಿಗ್ರಾಮ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ಗೆಲುವು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

Srinivas Rao BV

ನಂದಿಗ್ರಾಮ ವಿಧಾನಸಭೆಯಿಂದ ಸುವೇಂದು ಅಧಿಕಾರಿ ಶಾಸನಸಭೆಗೆ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಕೋರ್ಟ್ ಮೊರೆ ಹೋಗಿದ್ದಾರೆ. ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿರುವ ಮಮತಾ ಬ್ಯಾನರ್ಜಿ ಅವರ ಅರ್ಜಿಯ ವಿಚಾರಣೆ ಜೂ.18 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. 

ನಂದಿಗ್ರಾಮದಿಂದ ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿ 2,000 ಮತಗಳ ಅಂತರದಿಂದ ಸೋತಿದ್ದರು. ಈಗ ಸುವೇಂದು ಅಧಿಕಾರಿ ಅವರು ಚುನಾವಣೆಯಲ್ಲಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿರುವ ಮಮತಾ ಬ್ಯಾನರ್ಜಿ ಮೂರು ಅಂಶಗಳ ಆಧಾರದಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದಾರೆ. 

ಲಂಚ ನೀಡುವುದು ಸೇರಿದಂತೆ ಭ್ರಷ್ಟಾಚಾರದ ಮೂಲಕ, ದ್ವೇಷ ಹಾಗೂ ಶತ್ರುತ್ವವನ್ನು ಉತ್ತೇಜಿಸುವುದರ ಮೂಲಕ, ಧಾರ್ಮಿಕ ನೆಲೆಗಟ್ಟಿನಲ್ಲಿ ಮತಗಳನ್ನು ಕೇಳುವ ಮೂಲಕ, ಬೂತ್ ಕ್ಯಾಪ್ಚರ್ ಮೂಲಕ ಸುವೇಂದು ಅಧಿಕಾರಿ ಗೆದ್ದಿದ್ದಾರೆ, ಮತ ಎಣಿಕೆಯಲ್ಲಿನ ಪ್ರಕ್ರಿಯೆ ಹಾಗೂ ಮತ ಎಣಿಕೆಯ ಫಲಿತಾಂಶ, ಮತಗಳ ದಾಖಲೆಗೆ ಪಾಲಿಸಬೇಕಿರುವ ಪಾರ್ಮ್ 17 ಸಿ ಯ ಪಾಲನೆ ಮಾಡುವ ವಿಷಯದಲ್ಲಿ ಲೋಪದೋಷಗಳು ಕಂಡುಬಂದಿವೆ. ಈ ಎಲ್ಲಾ ಆಧಾರದಲ್ಲಿ ಸುವೇಂದು ಅಧಿಕಾರಿಯ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕೆಂದು ಮಮತಾ ಬ್ಯಾನರ್ಜಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 

ಇದೇ ವೇಳೆ ಮರು ಮತ ಎಣಿಕೆಗೆ ತಮ್ಮ ಅರ್ಜಿಯನ್ನು ತಿರಸ್ಕರಿಸಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಸುವೇಂದು ಅಧಿಕಾರಿ ಭ್ರಷ್ಟಾಚಾರದ ಮೂಲಕ ಮಮತಾ ಬ್ಯಾನರ್ಜಿ ಅವರ ಗೆಲುವಿನ ಸಾಧ್ಯತೆಗಳನ್ನು ವಸ್ತುತಃ ಬದಲಾವಣೆ ಮಾಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಪರ ವಕೀಲರು ಅರ್ಜಿಯಲ್ಲಿ ಹೇಳಿದ್ದಾರೆ.

SCROLL FOR NEXT