ದೇಶ

2024 ಚುನಾವಣೆಗೆ ಬಿಜೆಪಿ ವಿರೋಧಿ ಮೈತ್ರಿ?: ಪ್ರಶಾಂತ್ ಕಿಶೋರ್, ಪವಾರ್ 2ನೇ ಬಾರಿ ಮಾತುಕತೆ!

Vishwanath S

ನವದೆಹಲಿ: ಬಿಜೆಪಿ ವಿರುದ್ಧ ಮೂರನೇ ಫ್ರಂಟ್ ರಚನೆಯಾಗುವ ಬಗ್ಗೆ ಊಹಾಪೋಹಗಳ ನಡುವೆ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ರನ್ನು ಭೇಟಿಯಾಗಿ ಚರ್ಚೆ ನಡೆಸಿದರು. 

ಶರದ್ ಪವಾರ್ ಅವರ ನಿವಾಸದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಇನ್ನು ಕಳೆದ ಎರಡು ವಾರದಲ್ಲಿ ಇದು ಎರಡನೇ ಭೇಟಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಎನ್‌ಸಿಪಿಯ ಸಾಮಾನ್ಯ ಸಭೆಗೂ ಒಂದು ದಿನ ಮೊದಲು ಪ್ರಶಾಂತ್ ಕಿಶೋರ್ ಮತ್ತು ಪವಾರ್ ಸಭೆ ನಡೆಸಿದ್ದಾರೆ. 

ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವಿನಲ್ಲಿ ಪ್ರಶಾಂತ್ ಕಿಶೋರ್ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೂ ಮುನ್ನ ಜೂನ್ 11ರಂದು ಪವಾರ್ ಅವರನ್ನು ಭೇಟಿ ಮಾಡಲಾಗಿತ್ತು. ಇದು ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡುತ್ತಿರುವುದಕ್ಕೆ ಸಾಕ್ಷಿಯಾಗಿತ್ತು. 

ಮೂಲಗಳ ಪ್ರಕಾರ, ಮಾಜಿ ಹಣಕಾಸು ಸಚಿವ ಪ್ರಸ್ತುತ ಟಿಎಂಸಿ ಮುಖಂಡ ಯಶ್ವಂತ್ ಸಿನ್ಹಾ, ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ನಾಯಕ ಮನೋಜ್ ಝಾ ಮತ್ತು ಆಮ್ ಆದ್ಮಿ ಪಕ್ಷದ(ಎಎಪಿ) ಮುಖಂಡ ಸಂಜಯ್ ಸಿಂಗ್ ಕೂಡ ಮಂಗಳವಾರ ಪವಾರ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

2014ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಪರ ಕೆಲಸ ಮಾಡಿದ್ದ ಕಿಶೋರ್ ನಂತರ ಎನ್ ಡಿಎ ವಿರೋಧಿ ಪಕ್ಷಗಳಿಗೆ ಚುನಾವಣೆ ತಂತ್ರಗಾರರಾಗಿ ಕೆಲಸ ಮಾಡಿದ್ದಾರೆ. 

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪರ ಚುನಾವಣಾ ಕಾರ್ಯತಂತ್ರವನ್ನು ರೂಪಿಸಿದ್ದರು. ಇನ್ನು 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಮತ್ತು ಆರ್‌ಜೆಡಿ ಮೈತ್ರಿಕೂಟದ ಚುನಾವಣಾ ತಂತ್ರಗಾರರಾಗಿದ್ದರು.

SCROLL FOR NEXT