ದೇಶ

ಮಹಾರಾಷ್ಟ್ರದಲ್ಲಿ ಕೋವಿಡ್ ಡೆಲ್ಟಾ ಪ್ಲಸ್ ನ 21 ಪ್ರಕರಣಗಳು ಪತ್ತೆ

Srinivas Rao BV

ಮುಂಬೈ: ಅತಿ ಹೆಚ್ಚು ಆತಂಕಕ್ಕೆ ಕಾರಣವಾಗಿರುವ ಕೊರೋನಾದ ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣುವಿನ 21 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. 

ಈ ಬಗ್ಗೆ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಮಾಹಿತಿ ನೀಡಿದ್ದು, ರತ್ನಗಿರಿಯಲ್ಲಿ ಅತಿ ಹೆಚ್ಚು ಅಂದರೆ 9 ಪ್ರಕರಣಗಳು ಪತ್ತೆಯಾಗಿದ್ದು, 7 ಜಲ್ಗಾಂವ್, ಮುಂಬೈ ನಲ್ಲಿ ಎರಡು, ಪಾಲ್ಘರ್ ಹಾಗೂ ಥಾಣೆ, ಸಿಂಧೂದುರ್ಗ್ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.

ರಾಜ್ಯದ ವಿವಿಧ ಭಾಗಗಳಲ್ಲಿ 7,500 ಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳಿಸಲಾಗಿದೆ. ಈ ಮಾದರಿಗಳನ್ನು ಮೇ.15 ರಂದು ಸಂಗ್ರಹಿಸಲಾಗಿತ್ತು ಎಂದು ಸಚಿವರು ಮಾಹಿತಿ ನೀಡಿದ್ದಾರೆ. SARS-CoV2 ವೈರಾಣುಗಳಲ್ಲಿ ಸಣ್ಣ ರೂಪಾಂತರಗಳನ್ನೂ ತಿಳಿಯುವುದಕ್ಕೆ ಜಿನೋಮ್ ಸೀಕ್ವೆನ್ಸಿಂಗ್ ಸಹಕಾರಿಯಾಗಿದೆ.

ಈ ಪ್ರಕ್ರಿಯೆಯ ಮೂಲಕ ಸೋಂಕು ಪ್ರಸರಣ ಸರಪಳಿಯಲ್ಲಿನ ಕೊಂಡಿಗಳನ್ನು ಗುರುತಿಸಲಾಗುತ್ತದೆ. ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ಸೋಂಕಿಗೆ ಗುರಿಯಾದವರ ಸಂಪೂರ್ಣ ಮಾಹಿತಿಗಳನ್ನು ಪಡೆಯಲಾಗುತ್ತಿದೆ. ಅವರ ಪ್ರಯಾಣದ ವಿವರ, ಲಸಿಕೆ ಪಡೆದಿದ್ದಾರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಅಥವಾ ಸೋಂಕು ಮರುಕಳಿಸಿದೆಯೋ ಇಲ್ಲವೋ ಎಂಬ ಮಾಹಿತಿಗಳನ್ನು ಪಡೆಯಲಾಗುತ್ತಿದೆ ಎಂದು ಟೋಪೆ ತಿಳಿಸಿದ್ದಾರೆ.

SCROLL FOR NEXT