ದೇಶ

ಸ್ಮಾರ್ಟ್ ತರಗತಿಗಳ ಯೋಜನೆಯಡಿ ವಿದ್ಯಾರ್ಥಿಗಳಿಗೆ 1.55 ಲಕ್ಷ ಟ್ಯಾಬ್ಲೆಟ್, ಪಿಸಿ ವಿತರಣೆ

Srinivas Rao BV

ಬೆಂಗಳೂರು: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಇಂದು ಉನ್ನತ ಶಿಕ್ಷಣ ಇಲಾಖೆ ಇಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಡಿಜಿಟಲ್ ಕಲಿಕಾ ಯೋಜನೆಯಡಿ 2500 ಸ್ಮಾರ್ಟ್ ತರಗತಿಗಳನ್ನು ಉದ್ಘಾಟಿಸಿ   ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿ.ಸಿ.ಗಳನ್ನು ಸಾಂಕೇತಿಕವಾಗಿ ವಿತರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಸರ್ಕಾರಿ ಕಾಲೇಜುಗಳಲ್ಲಿ 2,500 ತರಗತಿಗಳನ್ನು ಸ್ಮಾರ್ಟ್ ತರಗತಿ ಕೊಠಡಿಗಳಾಗಿ ಉನ್ನತೀಕರಿಸಲಾಗಿದ್ದು,  ಪ್ರಸಕ್ತ ಸಾಲಿನಲ್ಲಿ 6,500 ತರಗತಿ ಕೊಠಡಿಗಳನ್ನು ಸ್ಮಾರ್ಟ್ ತರಗತಿಗಳಾಗಿ ಪರಿವರ್ತಿಸಲಾಗುವುದು ಎಂದರು.

2021-22ನೇ ಸಾಲಿನಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಟ್ಯಾಬ್ಲೆಟ್ ಪಿ.ಸಿ. ನೀಡಲಾಗುವುದು ಎಂದು ತಿಳಿಸಿದರು.

ಡಿಜಿಟಲ್ ಕಲಿಕೆ ಯೋಜನೆಯ ಮೂಲಕ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು 21ನೇ ಶತಮಾನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಅವರನ್ನು ಸಿದ್ಧಗೊಳಿಸಲಾಗುತ್ತಿದೆ. ಹಾಗೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಿರ್ಲಕ್ಷಿತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗದಂತೆ, ಈ ಕಾರ್ಯಕ್ರಮ ಖಾತ್ರಿಪಡಿಸುತ್ತದೆ ಎಂದರು.

ಈ ತರಗತಿ ಕೊಠಡಿಗಳಲ್ಲಿ Projector, white Board, Android Box, UPS ಮತ್ತು Internet ಸೌಲಭ್ಯವಿದ್ದು ಆಧುನಿಕ ಬೋಧನೆ-ಕಲಿಕೆಗಳಿಗೆ ಪೂರಕವಾಗಿರಲಿದೆ. ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳ ಕಲಿಕೆ ನಿರಾತಂಕವಾಗಿ ಮುಂದುವರಿಯಬೇಕು ಎನ್ನುವ ಉದ್ದೇಶದಿಂದ ಡಿಜಿಟಲ್ ಲರ್ನಿಂಗ್ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿದೆ.

ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಅವರು ಮಾತನಾಡಿ,  ಡಿಜಿಟಲ್ ಕಲಿಕೆ ಯೋಜನೆಯ ಪ್ರಥಮ ಹಂತದಲ್ಲಿ 27.77 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ಮಾರ್ಟ್ ತರಗತಿಗಳನ್ನು  ಅನುಸ್ಥಾಪಿಸಲಾಗಿದೆ. 

 ಒಟ್ಟು 1.55 ಲಕ್ಷ ವಿದ್ಯಾರ್ಥಿಗಳಿಗೆ 163 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಕಲಿಕೆ ಯೋಜನೆಯ ಅಂಗವಾಗಿ ಟ್ಯಾಬ್ಲೆಟ್ ಪಿ.ಸಿ.ಗಳನ್ನು ವಿತರಿಸಲಾಗುತ್ತಿದೆ. 2020-21ನೇ ಸಾಲಿನಲ್ಲಿ ಉನ್ನತ ಶಿಕ್ಷಣ ವ್ಯಾಪ್ತಿಯ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ, 87 ಸರ್ಕಾರಿ ಪಾಲಿಟೆಕ್ನಿಕ್‍ಗಳ ಪ್ರಥಮ-ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಹಾಗೂ 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಪ್ರಥಮ-ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ, ಈ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

4.07 ಕೋಟಿ ರೂ.ಗಳ ವೆಚ್ಚದಲ್ಲಿ ಆನ್‍ಲೈನ್-ಆಫ್‍ಲೈನ್ ಎರಡೂ ಪದ್ಧತಿಯ ಕಲಿಕೆಗೆ ಅನುರೂಪವಾದ ‘ಕರ್ನಾಟಕ ಎಲ್.ಎಂ.ಎಸ್ʼ ಎಂಬ ಸಮಗ್ರ ಕಲಿಕಾ ನಿರ್ವಹಣಾ ವೇದಿಕೆಯ ಮೂಲಕ ಪರಿಷ್ಕøತ ಮತ್ತು ಆಧುನಿಕ ರೀತಿಯ ಬೋಧನೆ-ಕಲಿಕೆಗಳನ್ನು ರೂಢಿಗೆ ತರಲಾಗುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು. ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಿಲಾಗಿದೆ.

SCROLL FOR NEXT