ದೇಶ

ಲಸಿಕೆ ಹಾಕಿಸಿಕೊಳ್ಳದಿದ್ದಲ್ಲಿ ವೇತನವೂ ಇಲ್ಲ: ಸರ್ಕಾರಿ ನೌಕರರಿಗೆ ಉಜ್ಜನಿ ಜಿಲ್ಲಾಧಿಕಾರಿ ಕ್ರಮ!

Srinivas Rao BV

ಉಜ್ಜೈನ್: ಮೂರನೇ ಅಲೆಗೂ ಮುನ್ನ ದೇಶಾದ್ಯಂತ ಲಸಿಕೆ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 

ಮಧ್ಯಪ್ರದೇಶದ ಉಜ್ಜೈನ್ ನ ಜಿಲ್ಲಾಡಳಿತ ತನ್ನೆಲ್ಲಾ ನೌಕರರನ್ನು ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಉತ್ತೇಜಿಸಲು ವಿನೂತನ ಕ್ರಮವೊಂದನ್ನು ಕೈಗೊಂಡಿದೆ. ಉಜ್ಜೈನ್ ನಲ್ಲಿರುವ ರಾಜ್ಯ ಸರ್ಕಾರದ ನೌಕರರು ಲಸಿಕೆ ಹಾಕಿಸಿಕೊಂಡಲ್ಲಿ ಮಾತ್ರವೇ ಅವರಿಗೆ ಮಾಸಿಕ ವೇತನ ನೀಡಲಾಗುತ್ತದೆ ಎಂದು ಉಜ್ಜೈನ್ ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ.

"ಜಿಲ್ಲಾಧಿಕಾರಿ ಆಶೀಶ್ ಸಿಂಗ್ ಈ ಆದೇಶ ಹೊರಡಿಸಿದ್ದು, ಜುಲೈ 31 ರ ಒಳಗೆ ಲಸಿಕೆ ಹಾಕಿಸಿಕೊಳ್ಳದೇ ಇದ್ದಲ್ಲಿ ಸರ್ಕಾರಿ ನೌಕರರಿಗೆ ವೇತನ ಬಿಡುಗಡೆ ಮಾಡುವುದಿಲ್ಲ, ಲಸಿಕೆ ಪ್ರಮಾಣಪತ್ರ ಸಲ್ಲಿಸುವ ನೌಕರರಿಗೆ ಮಾತ್ರವೇ ಜುಲೈ ತಿಂಗಳ ವೇತನವನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಶೇ.100 ರಷ್ಟು ಲಸಿಕೆಯ ಗುರಿಯನ್ನು ತಲುಪುವುದಕ್ಕೆ ಎಲ್ಲಾ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ವೇತನ ನೀಡುವುದರ ಜೊತೆಯಲ್ಲಿಯೇ ಲಸಿಕೆ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. 

ವಿವಿಧ ಇಲಾಖೆಗಳ ಮುಖ್ಯಸ್ಥರಿಗೂ ದಿನ ನಿತ್ಯದ ವೇತನ ಪಡೆದು ಅಥವಾ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳ ಲಸಿಕೆಯ ಸ್ಥಿತಿಯ ಬಗ್ಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಲಾಗಿದೆ. ಕೊರೋನಾದಿಂದ ಸಾವನ್ನಪ್ಪಿರುವ ಸರ್ಕಾರಿ ನೌಕರರು ಲಸಿಕೆ ಪಡೆದಿರಲಿಲ್ಲ ಎಂಬ ಮಾಹಿತಿ ಬಹಿರಂಗವಾಗಿದ್ದು ಸರ್ಕಾರಿ ನೌಕರರಿಗೆ ಲಸಿಕೆ ತೆಗೆದುಕೊಳ್ಳುವುದಕ್ಕೆ ಉತ್ತೇಜಿಸಲಾಗುತ್ತಿದೆ.

SCROLL FOR NEXT