ದೇಶ

ಸುಪ್ರೀಂ ಕೋರ್ಟ್ ಚಾಟಿ ಬೆನ್ನಲ್ಲೇ 10, 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದ ಆಂಧ್ರ ಪ್ರದೇಶ ಸರ್ಕಾರ

Srinivasamurthy VN

ಅಮರಾವತಿ: 10 ಮತ್ತು 12ನೇ ತರಗತಿ ಪರೀಕ್ಷೆ ಆಯೋಜನೆ ವಿಚಾರವಾಗಿ ಸುಪ್ರೀಂ ಕೋರ್ಟ್ ನಿಂದ ಎಚ್ಚರಿಕೆ ಪಡೆದ ಬೆನ್ನಲ್ಲೇ ಆಂಧ್ರ ಪ್ರದೇಶ ಸರ್ಕಾರ ಪರೀಕ್ಷೆಗಳನ್ನು ರದ್ದು ಮಾಡಿದೆ. 

ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ವಿಚಾರವಾಗಿ ನಿನ್ನೆ ಸುಪ್ರೀಂ ಕೋರ್ಟ್ ಆಂಧ್ರ ಪ್ರದೇಶ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಬಹಳ ಅನಿಶ್ಚಿತವಾಗಿದೆ ಮತ್ತು ಜುಲೈ ಕೊನೆಯ ವಾರದಲ್ಲಿ ಏನಾಗಬಹುದು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಕೋವಿಡ್‌ನಿಂದಾಗಿ ಯಾವುದೇ ಮಾರಣಾಂತಿಕ ಘಟನೆಗಳು ಸಂಭವಿಸಿದಲ್ಲಿ ರಾಜ್ಯ ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಮೃತರ ಕುಟುಂಬಗಳಿಗೆ ಕಡ್ಡಾಯವಾಗಿ 1 ಕೋಟಿ ರೂ ಪರಿಹಾರವನ್ನು ನೀಡಲೇಬೇಕು ಎಂದು ಆಂಧ್ರ ಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. 

ಸುಪ್ರೀಂ ಕೋರ್ಟ್ ಚಾಟಿ ಬೆನ್ನಲ್ಲೇ ಇದೀಗ ಆಂಧ್ರ ಪ್ರದೇಶ ಸರ್ಕಾರ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳನ್ನು ರದ್ದು ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಂಧ್ರ ಪ್ರದೇಶ ಶಿಕ್ಷಣ ಸಚಿವ ಎ ಸುರೇಶ್ ಅವರು, ಸುಪ್ರೀಂಕೋರ್ಟ್ ಆದೇಶ ಮತ್ತು ನಿರ್ಬಂಧಗಳಿಗೆ ಅನುಸಾರವಾಗಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ. ಪರೀಕ್ಷೆ ನಡೆಸಿ ಜುಲೈ 31ರೊಳಗೆ ಫಲಿತಾಂಶ ನೀಡುವುದು ಅಸಾಧ್ಯ. ಹೀಗಾಗಿ ಪರೀಕ್ಷೆಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

SCROLL FOR NEXT