ದೇಶ

ಮುಂದಿನ ತಿಂಗಳು ಜಾನ್ಸನ್ ಅಂಡ್ ಜಾನ್ಸನ್‌ ಕೋವಿಡ್ ಲಸಿಕೆ ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ

Vishwanath S

ನವದೆಹಲಿ: ಅಮೆರಿಕ ಮೂಲದ ಜಾನ್ಸನ್ ಅಂಡ್ ಜಾನ್ಸನ್‌ ನ ಅಂಗಸಂಸ್ಥೆ ಜಾನ್ಸೆನ್ ಉತ್ಪಾದಿಸಿರುವ ಕೋವಿಡ್ -19 ಲಸಿಕೆ ಮುಂದಿನ ತಿಂಗಳು ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ ಸಿಗಲಿದೆ.

ಪ್ರತಿ ಡೋಸ್ ಗೆ ಸುಮಾರು 2,000 ರೂ. ನಿಗದಿ ಮಾಡುವ ಸಾಧ್ಯತೆ ಇದೆ. ಈ ಲಸಿಕೆಯ ಮಹತ್ವವೆಂದರೆ ಇದು ಒಂದು ಡೋಸ್ ತೆಗದುಕೊಂಡರೆ ಸಾಕು. ಅಲ್ಲದೆ ಇದನ್ನು ಸಾಮಾನ್ಯ ರೆಫ್ರಿಜರೇಟರ್‌ಗಳಲ್ಲಿ ಮೂರು ತಿಂಗಳವರೆಗೆ ಸಂಗ್ರಹಿಸಬಹುದು. ಈ ಲಸಿಕೆಯ ಬೆಲೆ ಪ್ರತಿ ಡೋಸ್‌ಗೆ $25 ಅಥವಾ 1855 ರೂ. ಆಗಿರಲಿದೆ. ಜಿಎಸ್‌ಟಿ ಹೊರತುಪಡಿಸಿ ಖಾಸಗಿ ಆಸ್ಪತ್ರೆಗಳು 150 ರೂ. ವಿಧಿಸಲಿದೆ.

ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಈ ಲಸಿಕೆ ಪ್ರಯೋಗಗಳಲ್ಲಿ ಕೋವಿಡ್ ಸೋಂಕನ್ನು ತಡೆಗಟ್ಟುವಲ್ಲಿ 66.3ರಷ್ಟು ಪರಿಣಾಮಕಾರಿ ಎಂಬುದು ದೃಢಪಟ್ಟಿದ್ದು, ಲಸಿಕೆ ಪಡೆದ ಎರಡು ವಾರಗಳ ನಂತರ ಪ್ರತಿಕಾಯ ಸೃಷ್ಟಿಸುತ್ತದೆ. 

ನಾವು ಈ ಲಸಿಕೆಯನ್ನು ಭಾರತದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ನೀಡಲು ಪ್ರಯತ್ನಿಸುತ್ತಿದ್ದೇವೆ. ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಮೊದಲು ಭಾರತದಲ್ಲಿ ಈ ಲಸಿಕೆಗಾಗಿ ಪೂರೈಕೆ ಮಾರ್ಗವನ್ನು ಸ್ಥಾಪಿಸುವುದು ಮತ್ತು ಪರಿಶೀಲಿಸುವುದು ಇದರ ಉದ್ದೇಶವಾಗಿದೆ ಎಂದು ಭಾರತದ ಖಾಸಗಿ ಆಸ್ಪತ್ರೆ ಸಂಘದ ಮಹಾನಿರ್ದೇಶಕ ಗಿರ್ಧರ್ ಜೆ ಗಯಾನಿ ಹೇಳಿದರು. 

ವಿಶೇಷವಾಗಿ ಈ ಲಸಿಕೆ ಭಾರತಕ್ಕೆ ಸೂಕ್ತವಾಗಬಹುದು. ಲಸಿಕೆಯನ್ನು ಸುಲಭವಾಗಿ ಸಂಗ್ರಹಿಸಬಹುದು. ಇತ್ತೀಚೆಗೆ, ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಡಬ್ಲ್ಯುಎಚ್‌ಒ ಅನುಮೋದಿಸಿದ ವಿದೇಶಿ ನಿರ್ಮಿತ ಕೋವಿಡ್ 19 ಲಸಿಕೆಯನ್ನು ಬ್ರಿಡ್ಜಿಂಗ್ ಕ್ಲಿನಿಕಲ್ ಪ್ರಯೋಗಗಳಿಲ್ಲದೆ ಭಾರತದಲ್ಲಿ ಬಳಸಲು ಭಾರತ ಸರ್ಕಾರ ನಿಯಂತ್ರಕ ಮಾನದಂಡಗಳನ್ನು ಸಡಿಲಗೊಳಿಸಿತ್ತು.

SCROLL FOR NEXT