ದೇಶ

ನೇಮಕಗೊಂಡ ಕೆಲವೇ ವಾರಗಳಲ್ಲಿ ಹುದ್ದೆ ತೊರೆದ ಟ್ವಿಟರ್ ನ ಕುಂದುಕೊರತೆ ಆಲಿಸುವ ಅಧಿಕಾರಿ!

Srinivas Rao BV

ನವದೆಹಲಿ: ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ಐಟಿ ಕಾನೂನುಗಳ ಪ್ರಕಾರ ಟ್ವಿಟರ್ ನಿಂದ ನೇಮಕಗೊಂಡಿದ್ದ ಕುಂದುಕೊರತೆ ಆಲಿಸುವ ಅಧಿಕಾರಿಯ ಹುದ್ದೆಯಿಂದ ನಿರ್ಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾನೂನು ಪಾಲನೆಯ ಹಿನ್ನೆಲೆಯಲ್ಲಿ ಟ್ವಿಟರ್ ಸಂಸ್ಥೆ ಮಧ್ಯಂತರವಾಗಿ ಧರ್ಮೇಂದ್ರ ಚತುರ್ ಎಂಬ ವ್ಯಕ್ತಿಯನ್ನು ಭಾರತದ ಗ್ರೀವಿಯೆನ್ಸ್ ಅಧಿಕಾರಿ (ಗ್ರಾಹರ ದೂರಿಗೆ ಸ್ಪಂದಿಸುವ ಅಧಿಕಾರಿ)ಯನ್ನಾಗಿ ನೇಮಕ ಮಾಡಿತ್ತು. 

ಈಗ ಧರ್ಮೇಂದ್ರ ಚತುರ್ ಹುದ್ದೆಯಿಂದ ನಿರ್ಗಮಿಸಿರುವ ಮಾಹಿತಿ ಲಭ್ಯವಾಗಿದೆ. ಸಾಮಾಜಿಕ ಜಾಲತಾಣದ ಸಂಸ್ಥೆ ಧರೇಂದ್ರ ಚತುರ್ ಅವರ ಹೆಸರನ್ನು ಪ್ರದರ್ಶಿಸುತ್ತಿಲ್ಲ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಲು ಟ್ವಿಟರ್ ನಿರಾಕರಿಸಿದೆ. 

ಹೊಸ ಐಟಿ ಕಾನೂನು ಪಾಲನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ-ಟ್ವಿಟರ್ ಜಟಾಪಟಿಯ ನಡುವೆ ಈ ಬೆಳವಣಿಗೆ ಸಂಭವಿಸಿದೆ. 

ದೇಶದ ಹೊಸ ಕಾನೂನು ಪಾಲನೆಗೆ ಉದ್ದೇಶಪೂರ್ವಕವಾಗಿ ಟ್ವಿಟರ್ ನಿರಾಕರಿಸುತ್ತಿದೆ ಹಾಗೂ ನಿರ್ಲಕ್ಷ್ಯಿಸುತ್ತಿದೆ ಎಂದು ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣ ಸಂಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು.  

ಮೇ.25 ರಂದು ಹೊಸ ಕಾನೂನು ಜಾರಿಯಾಗಿದ್ದು, ಸಾಮಾಜಿಕ ಜಾಲತಾಣ ಸಂಸ್ಥೆಗಳು ತಮ್ಮ ಗ್ರಾಹಕರಿಂದ ದೂರು ಅಥವಾ ಆಕ್ಷೇಪಣೆಗಳು ವ್ಯಕ್ತವಾದಲ್ಲಿ ಅವುಗಳನ್ನು ಆಲಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕಿದೆ. 

50 ಲಕ್ಷ ಬಳಕೆದಾರರನ್ನು ಹೊಂದಿರುವ ಸಂಸ್ಥೆಗಳು ಕುಂದು-ಕೊರತೆಗಳನ್ನು ಆಲಿಸುವ ಅಧಿಕಾರಿಯನ್ನು ನೇಮಕ ಮಾಡಿ ಅವರ ಹೆಸರನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂಬ ನಿಯಮವಿದೆ. ಅಷ್ಟೇ ಅಲ್ಲದೇ ಮುಖ್ಯ ಅನುಸರಣೆ ಅಧಿಕಾರ, ನೋಡಲ್ ಸಂಪರ್ಕ ಅಧಿಕಾರಿ ಹಾಗೂ ಸ್ಥಳೀಯವಾಗಿ ಕುಂದು ಕೊರತೆಗಳನ್ನು ಆಲಿಸುವ ಅಧಿಕಾರಿಯ ನೇಮಕವಾಗಬೇಕಿದೆ. 

ಸರ್ಕಾರದ ಮಾಹಿತಿಯ ಪ್ರಕಾರ ಟ್ವಿಟರ್ ನ ಮೊಂಡಾಟಕ್ಕೆ ಈಗ ಅದು ಕಾನೂನಿನ ರಕ್ಷಣೆಯನ್ನು ಕಳೆದುಕೊಂಡಿದ್ದು, ಟ್ವಿಟರ್ ನಲ್ಲಿ ಅದರ ಚಂದಾದಾರರು ಪೋಸ್ಟ್ ಮಾಡುವ ಅಂಶಗಳಿಗೆ ಕಾನೂನಾತ್ಮಕವಾಗಿ ಸಂಸ್ಥೆಯೇ ಹೊಣೆಯಾಗಿರಲಿದೆ. 
 

SCROLL FOR NEXT