ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸಾಕಷ್ಟು ಹೋರಾಟ ನಡೆಸಿದ್ದ ಬಿಜೆಪಿಗೆ ಅಲ್ಪ ಹಿನ್ನಡೆಯಾಗಿದೆ. ಈ ಬಾರಿ ಗದ್ದುಗೆ ಏರುವ ಕನಸು ಕಂಡಿದ್ದ ಬಿಜೆಪಿಯ ನನಸಾಗಲಿಲ್ಲ. ತೃಣಮೂಲ ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಿತು.
ಮುಂದಿನ ವರ್ಷ ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ್, ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಕೊರೋನಾ ಎರಡನೇ ಅಲೆಯಿಂದ ತತ್ತರಿಸಿ ಹೋಗಿರುವ ದೇಶದಲ್ಲಿ ಸದ್ಯಕ್ಕೆ ಜನರಿಗೆ ಕೋವಿಡ್ ಲಸಿಕೆ ನೀಡುವುದು ಕೇಂದ್ರ ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಮತ್ತೊಂದೆಡೆ ರೈತರ ಪ್ರತಿಭಟನೆಯೂ ತಲೆನೋವಾಗಿದೆ.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನರೇಂದ್ರ ಸಿಂಗ್ ತೋಮರ್, ನಿರ್ಮಲಾ ಸೀತಾರಾಮನ್ ಅವರು ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿರುವ ಚುನಾವಣಾ ವ್ಯಾಪ್ತಿಯ ರಾಜ್ಯಗಳಿಗೆ, ವಿಶೇಷವಾಗಿ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್‌ಗಳ ಯೋಜನೆಗಳನ್ನು ರೂಪಿಸಲು ಬಿಜೆಪಿ ಅಧ್ಯಕ್ಷರು ಪಕ್ಷದ ಉಪಾಧ್ಯಕ್ಷರು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಆಯಾ ರಾಜ್ಯ ವಿತರಣೆಗಳ ಆಧಾರದ ಮೇಲೆ ಪಕ್ಷದ ಪರವಾಗಿ ಪ್ರಚಾರ, ಕಾರ್ಯತಂತ್ರ ನಡೆಸಲು ಬಿಜೆಪಿ ಶೀಘ್ರದಲ್ಲೇ ಈ ರಾಜ್ಯಗಳ ಜಿಲ್ಲೆಗಳ ಪ್ರವಾಸಕ್ಕಾಗಿ ಹಿರಿಯ ಮಂತ್ರಿಗಳನ್ನು ಕಳುಹಿಸಲಿದೆ.
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಕೂಡ ಸವಾಲಾಗಿದೆ. ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯ ಕೇಸರಿ ಪಕ್ಷದ ವಿರುದ್ಧ ತಿರುಗಿಬಿದ್ದರೆ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಹಿನ್ನಡೆಯಾಗಬಹುದು.
ರೈತರ ಆಕ್ರೋಶವನ್ನು ಎದುರಿಸಿ ಅವರನ್ನು ಪ್ರತಿಭಟನೆಯಿಂದ ಹಿಂದೆ ಸರಿಸಲು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಾಣುವುದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮುಂದಾಳತ್ವವೇ. ಉತ್ತರ ಪ್ರದೇಶದ ಪಶ್ಚಿಮ ಭಾಗದ ಜೊತೆಗೆ ಬಿಜೆಪಿಯು ಪಂಜಾಬ್‌ನಲ್ಲಿ ಚುನಾವಣಾ ಅಪಾಯವನ್ನು ಎದುರಿಸುತ್ತಿದೆ, ಅಲ್ಲಿ ಅದರ ಹಳೆಯ ಮಿತ್ರ ಶಿರೋಮಣಿ ಅಕಾಲಿ ದಳವು ಬಹುಜನ ಸಮಾಜವಾದಿ ಪಕ್ಷದೊಂದಿಗೆ ಸ್ವತಂತ್ರ ಹಾದಿಯನ್ನು ಸಜ್ಜುಗೊಳಿಸುತ್ತಿದೆ.
ಡಿಸೆಂಬರ್ ವೇಳೆಗೆ ದೇಶದ ಅರ್ಹ ನಾಗರಿಕರಿಗೆಲ್ಲರಿಗೂ ಕೋವಿಡ್ -19 ವಿರುದ್ಧ ಲಸಿಕೆ ಹಾಕುವ ಉದ್ದೇಶವನ್ನು ಸರ್ಕಾರ ಹೊಂದಿದ್ದರೂ, ಪಕ್ಷದ ಮುಖಂಡರು ಅಕ್ಟೋಬರ್ ಒಳಗಡೆಯೇ ನೀಡಬೇಕೆಂದು ಹೇಳುತ್ತಿವೆ.ಆಗ ದೇಶದಲ್ಲಿ ಮೋದಿ ಪರ ಅಲೆ ಸೃಷ್ಟಿಯಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಬಂಗಾಳ ಚುನಾವಣಾ ಪ್ರಚಾರದ ನಂತರ ಕೋವಿಡ್ ಎರಡನೇ ಅಲೆ ಬಂದು ಬಿಜೆಪಿ ತೀವ್ರ ಟೀಕೆ ಎದುರಿಸಬೇಕಾಯಿತು. ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಮುನ್ನ ಈ ಸವಾಲುಗಳನ್ನು ಬಿಜೆಪಿ ಗೆದ್ದುಬರಬೇಕು.