ದೇಶ

ಗ್ರೀನ್ ಪಾಸ್ ಯೋಜನೆಯಡಿ ಕೋವಿಶೀಲ್ಡ್, ಕೋವಾಕ್ಸಿನ್ ಲಸಿಕೆ ಪಡೆದವರನ್ನು ಪರಿಗಣಿಸಿ: ಇಯು ರಾಷ್ಟ್ರಗಳಿಗೆ ಭಾರತದ ಮನವಿ

Nagaraja AB

ನವದೆಹಲಿ: ಯುರೋಪಿಯನ್ ಒಕ್ಕೂಟವು ತನ್ನ 'ಗ್ರೀನ್ ಪಾಸ್' ಯೋಜನೆಯಡಿ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸುತ್ತಿರುವುದರಿಂದ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ತೆಗೆದುಕೊಂಡು ಯುರೋಪ್ ಗೆ ತೆರಳಲು ಬಯಸುವ ಭಾರತೀಯರಿಗೆ ಅವಕಾಶ ನೀಡುವುದನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ  ಭಾರತ 27 ರಾಷ್ಟ್ರಗಳ ಗುಂಪಿನ ಸದಸ್ಯರನ್ನು ಕೇಳಿದೆ.

ಕೋವಿನ್ ಪೋರ್ಟಲ್ ಮೂಲಕ ನೀಡಲಾದ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸ್ವೀಕರಿಸುವಂತೆ ಭಾರತವು ಇಯು ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್-19  ಸಾಂಕ್ರಾಮಿಕ ಸಮಯದಲ್ಲಿ ಮುಕ್ತ ಸಂಚಾರಕ್ಕೆ ಅನುಕೂಲವಾಗುವ ಉದ್ದೇಶದಿಂದ ಯುರೋಪಿಯನ್ ಯೂನಿಯನ್‌ನ ಡಿಜಿಟಲ್ ಕೋವಿಡ್ ಪ್ರಮಾಣಪತ್ರ ಅಥವಾ ಗ್ರೀನ್ ಪಾಸ್  ಗುರುವಾರದಿಂದ ಜಾರಿಗೆ ಬರಲಿದೆ.

ಇದರಡಿ  ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ನಿಂದ ಅಧಿಕೃತ ಲಸಿಕೆಗಳನ್ನು ತೆಗೆದುಕೊಂಡ ವ್ಯಕ್ತಿಗಳಿಗೆ ಯುರೋಪಿಯನ್ ಪ್ರದೇಶದೊಳಗೆ ಪ್ರವಾಸ ಪ್ರಯಾಣ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗುತ್ತದೆ.  ವೈಯಕ್ತಿಕ ಸದಸ್ಯ ರಾಷ್ಟ್ರಗಳು ರಾಷ್ಟ್ರೀಯ ಮಟ್ಟದಲ್ಲಿ ಅಥವಾ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಿಂದ ಗುರುತಿಸಲ್ಪಟ್ಟ ಲಸಿಕೆಗಳನ್ನು ಸಹ ಸ್ವೀಕರಿಸುವ ನಮ್ಯತೆಯನ್ನು ಹೊಂದಿವೆ.

ಭಾರತದಲ್ಲಿ ಕೋವಿಡ್-19 ಲಸಿಕೆಗಳನ್ನು ತೆಗೆದುಕೊಂಡ ವ್ಯಕ್ತಿಗಳಿಗೆ, ಅಂದರೆ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್, ಮತ್ತು ಕೋವಿನ್ ಪೋರ್ಟಲ್ ಮೂಲಕ ನೀಡಲಾದ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸ್ವೀಕರಿಸುವ ವ್ಯಕ್ತಿಗಳಿಗೆ ಇದೇ ರೀತಿಯ ವಿನಾಯಿತಿ ನೀಡುವುದನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ಇಯು ಸದಸ್ಯ ರಾಷ್ಟ್ರಗಳಿಗೆ ವಿನಂತಿ ಮಾಡಿಕೊಂಡಿರುವುದಾಗಿ ಮೂಲವೊಂದು ತಿಳಿಸಿದೆ.

SCROLL FOR NEXT