ದೇಶ

ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ: ಕೋವಿಡ್ ಲಸಿಕೆ ಅಭಿಯಾನ ತ್ವರಿತಕ್ಕೆ ವಿಶೇಷ ಒತ್ತು

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಪ್ರಧಾನ ಮಂತ್ರಿಗಳು ತಮ್ಮ ಸಂಪುಟದ ಹಿರಿಯ ಸಹೋದ್ಯೋಗಿಗಳು ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡ ಅವರೊಂದಿಗೆ ಇತ್ತೀಚಿನ ದಿನಗಳಲ್ಲಿ ಸಚಿವರುಗಳ ಸಾಧನೆ, ಕೆಲಸಗಳ ಕುರಿತು ಪರಾಮರ್ಶಿಸಲು ಹಲವು ಸಭೆಗಳನ್ನು ನಡೆಸಿದ್ದರು.

ಕೇಂದ್ರ ಸಚಿವ ಸಂಪುಟದ ಪುನರ್ರಚನೆ ಅಥವಾ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ ಎಂದು ಕೇಳಿಬರುತ್ತಿರುವ ಹಲವು ಊಹಾಪೋಹಗಳ ಮಧ್ಯೆ ಇಂದು ನಡೆಯಲಿರುವ ಸಭೆಗೆ ಮಹತ್ವ ಸಿಕ್ಕಿದೆ. ಸದ್ಯ ಕೇಂದ್ರ ಸರ್ಕಾರದ ಮುಂದಿರುವ ಸವಾಲು ಕೋವಿಡ್-19 ಲಸಿಕೆ ನೀಡಿಕೆಯನ್ನು ತ್ವರಿತಗೊಳಿಸಿ ದೇಶವನ್ನು ಕೊರೋನಾ ಮುಕ್ತಗೊಳಿಸುವುದು. ಈ ಮೂಲಕ ಪ್ರತಿಪಕ್ಷಗಳ ಟೀಕೆಗಳಿಗೆ ಬೀಗ ಹಾಕುವುದು ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದೆ.

ಇಂದು ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಸಭೆ ವರ್ಚುವಲ್ ಮೀಟಿಂಗ್ ಆಗಿರುತ್ತದೆ. ಸಂಸತ್ತಿನ ಮುಂಗಾರು ಅಧಿವೇಶನ ಇನ್ನು ಕೆಲವು ವಾರಗಳಲ್ಲಿ ಆರಂಭವಾಗಲಿದ್ದು ಅದಕ್ಕೆ ಸಿದ್ದತೆಯಾಗಬೇಕಿದೆ. ಈ ನಿಟ್ಟಿನಲ್ಲಿ ಇಂದು ಸಾಯಂಕಾಲ ನಡೆಯಲಿರುವ ಸಚಿವ ಸಂಪುಟ ಸಭೆಗೆ ಮುನ್ನ ಇಂದು ಬೆಳಗ್ಗೆ ಕೂಡ ಸಭೆ ಸೇರಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. 

ಕಳೆದ ಶನಿವಾರ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡ ನೇತೃತ್ವದಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಸರ್ಕಾರದ ಹಿರಿಯ ಸಚಿವರುಗಳು ಸೇರಿ ಸಭೆ ನಡೆಸಿ ಚರ್ಚಿಸಿದ್ದರು. ಮುಂದಿನ ವರ್ಷ ನಡೆಯಲಿರುವ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ತಯಾರಾಗುವ ಬಗ್ಗೆ ಕೂಡ ಕಾರ್ಯತಂತ್ರ ಹೆಣೆಯಲಾಗುತ್ತಿದೆ ಎಂದು ತಿಳಿದುಬಂದಿದೆ. 

SCROLL FOR NEXT