ದೇಶ

ಕೋವಿಡ್-19 ಹೆಚ್ಚಳ ಎದುರಿಸಲು ರಾಷ್ಟ್ರೀಯ ನೀತಿ ರೂಪಿಸಲು ರಾಜಕೀಯ ಒಮ್ಮತ ಮೂಡಿಸಿ: ಕೇಂದ್ರಕ್ಕೆ ಸೋನಿಯಾ ಗಾಂಧಿ

Sumana Upadhyaya

ನವದೆಹಲಿ: ಕೋವಿಡ್-19 ಎರಡನೇ ಅಲೆಯಲ್ಲಿ ದೇಶದ ನಾಗರಿಕರು ಪರಿತಪಿಸುತ್ತಿರುವಾಗ ಸೋಂಕು ಹರಡುವುದನ್ನು ತಡೆಯಲು ರಾಷ್ಟ್ರೀಯ ನೀತಿ ರೂಪಿಸಲು ರಾಜಕೀಯ ಒಮ್ಮತ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.

ವಿಡಿಯೊ ಸಂದೇಶದಲ್ಲಿ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಎಚ್ಚೆತ್ತುಕೊಂಡು ತಮ್ಮ ಕರ್ತವ್ಯ, ಕೆಲಸಗಳನ್ನು ನಿರ್ವಹಿಸುವ ಸಮಯವಿದು ಎಂದು ಹೇಳಿದ್ದಾರೆ.

ದೇಶದ ಎಲ್ಲಾ ನಾಗರಿಕರಿಗೂ ಕೋವಿಡ್-19 ಲಸಿಕೆಯನ್ನು ಉಚಿತವಾಗಿ ನೀಡಬೇಕು, ಲಸಿಕೆಯನ್ನು ವೇಗವಾಗಿ ನೀಡಲು ಉತ್ಪಾದನೆಯನ್ನು ವೃದ್ಧಿಸಲು ಕಡ್ಡಾಯ ಪರವಾನಗಿಯನ್ನು ಉತ್ಪಾದಕ ಕಂಪೆನಿಗಳಿಗೆ ಸರ್ಕಾರ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ದೇಶದಲ್ಲಿನ ಕೋವಿಡ್ ಬಿಕ್ಕಟ್ಟನ್ನು ಎದುರಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸಲು ಮತ್ತು ಅದರ ಬಗ್ಗೆ ರಾಜಕೀಯ ಒಮ್ಮತವನ್ನು ತರಲು ಕೇಂದ್ರ ಸರ್ಕಾರವನ್ನು ಕೋರುತ್ತೇನೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಈಗಿನ ಬಿಕ್ಕಟ್ಟಿನ ಸನ್ನಿವೇಶನದಲ್ಲಿ ಕೇಂದ್ರ ಸರ್ಕಾರ ಪ್ರತಿ ಬಡವರ ಕುಟುಂಬಗಳಿಗೆ ತಲಾ 6 ಸಾವಿರ ರೂಪಾಯಿ ನೀಡಬೇಕು, ಇಲ್ಲದಿದ್ದರೆ ಬಡವರಿಗೆ ಜೀವನ ಸಾಗಿಸುವುದು ಕಷ್ಟವಾಗುತ್ತದೆ ಎಂದಿದ್ದಾರೆ.

ಕೋವಿಡ್ ಔಷಧಿಗಳು ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟವಾಗುವುದನ್ನು ತಡೆಯಲು ತಪಾಸಣೆಯನ್ನು ಹೆಚ್ಚಿಸಬೇಕು, ಈ ಕಷ್ಟದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರದ ಜೊತೆಗೆ ನಿಲ್ಲುತ್ತಿದ್ದು ಭಾರತೀಯರೆಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ ಎಂದಿದ್ದಾರೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ ಗರಿಷ್ಠ 4,01,993 ಕ್ಕೆ ಕೊರೋನಾ ಸೋಂಕು ತಲುಪಿದ್ದು, ದೇಶದಲ್ಲಿ ಒಟ್ಟು 1,91,64,969 ಸೋಂಕಿತರಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ 3 ಸಾವಿರದ 523 ಮಂದಿ ಹೊಸದಾಗಿ ಸೋಂಕಿಗೆ ಬಲಿಯಾಗಿದ್ದು ದೇಶದಲ್ಲಿ ಸಾವಿನ ಸಂಖ್ಯೆ 2 ಲಕ್ಷದ 11 ಸಾವಿರದ 853ಕ್ಕೆ ತಲುಪಿದೆ.

SCROLL FOR NEXT