ದೇಶ

ಗ್ರಾಮ ಪ್ರವೇಶಕ್ಕೆ ತಡೆ: ಕಣ್ಣೆದುರೇ ಕೋವಿಡ್-19 ಸೋಂಕಿತನ ಸಾವಿಗೆ ಸಂಬಂಧಿಕರು ಮೂಕ ಸಾಕ್ಷಿ! 

Srinivas Rao BV

ಶ್ರೀಕಾಕುಳಂ: ಕೋವಿಡ್-19 ಸೋಂಕಿತನಿಗೆ ಗ್ರಾಮದ ಒಳಗೆ ಪ್ರವೇಶವನ್ನು ತಡೆದ ಪರಿಣಾಮ ಆತ ಕಣ್ಣೆದುರೇ ಸಾವನ್ನಪ್ಪುತ್ತಿರುವುದಕ್ಕೆ ಸಂಬಂಧಿಕರು ಮೂಕ ಸಾಕ್ಷಿಯಾದ ಹೃದಯವಿದ್ರಾವಕ ಘಟನೆ ಆಂಧ್ರದ ಕೊಯ್ಯಂಪೇಟ ಗ್ರಾಮದಲ್ಲಿ ನಡೆದಿದೆ. 

ಕೊರೋನಾ ಹರಡುವಿಕೆಯ ಭಯದಿಂದ ಗ್ರಾಮಸ್ಥರು ಕೋವಿಡ್ ಸೋಂಕಿತ, 44 ವರ್ಷದ ಪಂಚಿರೆಡ್ಡಿ ಅಸಿರಿ ನಾಯ್ಡು ಅವರನ್ನು ಗ್ರಾಮಕ್ಕೆ ಪ್ರವೇಶಿಸಲು ತಡೆಯೊಡ್ಡಿದ್ದಾರೆ. 

ಕೋವಿಡ್-19 ಸೋಂಕಿತ ವ್ಯಕ್ತಿ ವಿಜಯವಾಡದಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ದಿನಗೂಲಿ ಕಾರ್ಮಿಕನಾಗಿ ಜೀವನ ನಡೆಸುತ್ತಿದ್ದರು. ಕಳೆದ ಶನಿವಾರದಂದು ಆತನಿಗೆ ಕೋವಿಡ್-19 ಸೋಂಕಿರುವುದು ದೃಢಪಟ್ಟಿತ್ತು. ಈ ನಡುವೆ ಸರ್ಕಾರ ಭಾಗಶಃ ಕರ್ಫ್ಯೂ ವಿಧಿಸಿದ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಲಾಕ್ ಡೌನ್ ಉಂಟಾಗಬಹುದೆಂದು ಬೆದರಿ ಭಾನುವಾರ ಬೆಳಿಗ್ಗೆ ತಮ್ಮ ಗ್ರಾಮಕ್ಕೆ ಮರಳಿದ್ದಾರೆ. 

ಈ ವ್ಯಕ್ತಿಗೆ ಕೋವಿಡ್-19 ಸೋಂಕು ಇರುವುದನ್ನು ಅರಿತ ಗ್ರಾಮಸ್ಥರು ಆತನನ್ನು ಗ್ರಾಮ ಪ್ರವೇಶಿಸದಂತೆ ನಿರ್ಬಂಧಿಸಿ, ಗ್ರಾಮದ ಹೊರಭಾಗದಲ್ಲಿದ್ದ ಗುಡಿಸಲ್ಲಿ ಇರುವಂತೆ ಒತ್ತಡ ಹೇರಿದ್ದಾರೆ. ಅದೇ ದಿನ ಮಧ್ಯಾಹ್ನ ನಾಯ್ಡು ಉಸಿರಾಟದ ಸಮಸ್ಯೆಯಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಕುಟುಂಬ ಸದಸ್ಯರು ಆತ ಕುಸಿದುಬೀಳುತ್ತಿದ್ದದ್ದನ್ನು ನೋಡುವ ಅಸಹಾಯಕ ಪರಿಸ್ಥಿತಿಯಲ್ಲಿದ್ದರು. 

ಮಗಳು ತನ್ನ ತಂದೆಗೆ ನೀರು ಕೊಡಲು ಯತ್ನಿಸಿದಳಾದಳೂ ಭಯದಿಂದ ಆತನ ಬಳಿ ಹೋಗಲು ಬಿಡಲಿಲ್ಲ. 

ಆತ ಕುಸಿದು ಬೀಳುತ್ತಿದ್ದರೂ ಸ್ಥಳದಲ್ಲಿ ಸೇರಿದ ಗ್ರಾಮಸ್ಥರು ವಿಡಿಯೋಗಳನ್ನು ತೆಗೆದುಕೊಂಡರೇ ಹೊರತು ಆತನನ್ನು ಆಸ್ಪತ್ರೆಗೆ ಸೇರಿಸುವ ಮಾನವಿಯತೆ ತೋರಲಿಲ್ಲ. 

ಪುರಸಭೆ ಸಿಬ್ಬಂದಿ ಕೋವಿಡ್-19 ಶಿಷ್ಟಾಚಾರದ ಪ್ರಕಾರ ಆತನ ಅಂತ್ಯಸಂಸ್ಕಾರ ನಡೆಸಿದ್ದಾರೆ. ಮರು ದಿನ ಕಂದಾಯ ಅಧಿಕಾರಿಗಳು ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದು ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ. ಈ ನಡುವೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದವರಿಗೂ ಕೊರೋನಾ ಸೋಂಕು ತಗುಲಿದೆ. 

SCROLL FOR NEXT