ದೇಶ

ಕೊರೊನಾ ಲಸಿಕೆ ವಿತರಣೆ: ಕೇರಳವನ್ನು ಕೊಂಡಾಡಿದ ಪ್ರಧಾನಿ ಮೋದಿ

Srinivasamurthy VN

ನವದೆಹಲಿ: ಕೊರೋನಾ ಲಸಿಕೆ ವಿತರಣೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಕೇರಳ ಸರ್ಕಾರವನ್ನು ಕೊಂಡಾಡಿದ್ದಾರೆ.

ದೇಶಾದ್ಯಂತ ಮಾರಕ ಕೊರೋನಾ ವೈರಸ್ ಅಬ್ಬರ ಜೋರಾಗಿರುವಂತೆಯೇ ಕೋವಿಡ್ ಲಸಿಕೆಗಾಗಿ ಹಾಹಾಕಾರ ಎದ್ದಿದೆ. ಅಂತೆಯೇ ಕೋವಿಡ್ ಲಸಿಕೆಗಳ ವಿತರಣೆಯಂತೆಯೇ ಲಸಿಕೆಗಳ ವೇಸ್ಟೇಜ್ ಕುರಿತು ಕೂಡ ಸಾಕಷ್ಟು ಚರ್ಚೆ ಎದ್ದಿದೆ. ಲಸಿಕೆ ವ್ಯರ್ಥ ಮಾಡುವ ವಿಚಾರದಲ್ಲಿ ಕೇರಳದ್ದು ಅತಿ ಕಡಿಮೆ  ಪ್ರಮಾಣವಿದೆ. ಮೇಘಾಲಯ, ನಾಗಾಲ್ಯಾಂಡ್, ಬಿಹಾರ್, ಪಂಜಾಬ್, ದಾದ್ರಾ, ನಗರ್ ಹವೇಲಿ, ಹರಿಯಾಣ, ಮಣಿಪುರ, ಅಸ್ಸಾಂ, ತಮಿಳುನಾಡು, ಲಕ್ಷದ್ವೀಪದಲ್ಲಿ ಶೇ.4.01 ರಿಂದ ಶೇ.9.76ವರೆಗೂ ಲಸಿಕೆ ವ್ಯರ್ಥವಾಗಿರುವ ವರದಿಯಾಗಿದೆ.

ಕೊರೊನಾ ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸುವಲ್ಲಿ ಕೇರಳದ ಆರೋಗ್ಯ ಕಾರ್ಯಕರ್ತರು ಹಾಗೂ ದಾದಿಯರ ಪರಿಶ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. 'ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಕೊರೊನಾ ಲಸಿಕೆಗಳು ಅನಗತ್ಯವಾಗಿ ವ್ಯರ್ಥವಾಗುವುದನ್ನು ತಪ್ಪಿಸುವುದು ಕೊರೊನಾ ವಿರುದ್ಧದ ಭಾರತದ  ಹೋರಾಟಕ್ಕೆ ಬಲ ತುಂಬಿದಂತೆ ಎಂದು ಹೇಳಿದ್ದಾರೆ. 

ಲಸಿಕೆಯು ವ್ಯರ್ಥವಾಗುವುದನ್ನು ತಪ್ಪಿಸುವ ಮೂಲಕ ನಮ್ಮ ಆರೋಗ್ಯ ಕಾರ್ಯಕರ್ತರು ಹಾಗೂ ದಾದಿಯರು ಮಾದರಿ ಎನಿಸಿಕೊಂಡಿದ್ದಾರೆ. ಇದು ಕೊರೊನಾ ವಿರುದ್ಧದ ಹೋರಾಟಕ್ಕೆ ಬಲ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.

ತಮ್ಮ ರಾಜ್ಯದಲ್ಲಿ ಕೊರೊನಾ ಲಸಿಕೆಗಳನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದರ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರಧಾನಿ ಪ್ರತಿಕ್ರಿಯಿಸಿ, ಲಸಿಕೆ ವಿಚಾರದಲ್ಲಿ ಕೇರಳ ಸರ್ಕಾರ ನಡೆ ಮಾದರಿ ಎಂದು ಶ್ಲಾಘಿಸಿದ್ದಾರೆ.

ಕೇರಳಕ್ಕೆ ಕೇಂದ್ರ ಸರ್ಕಾರದಿಂದ 73,38,806 ಡೋಸ್ ಲಸಿಕೆಗಳು ಲಭ್ಯವಾಗಿವೆ. ಒಬ್ಬರಿಗೆ ಲಸಿಕೆ ನೀಡಿದ ನಂತರ ಉಳಿಯುವ, ವ್ಯರ್ಥವಾಗಬಹುದಾದ ಲಸಿಕೆಯನ್ನು ಬಳಸಿಕೊಂಡು ನಾವು 74,26,164 ಡೋಸ್ ಲಸಿಕೆ ನೀಡಿದ್ದೇವೆ. ನಮ್ಮ ಆರೋಗ್ಯ ಕಾರ್ಯಕರ್ತರು, ದಾದಿಯರು ಈ ನಿಟ್ಟಿನಲ್ಲಿ ದಕ್ಷತೆಯಿಂದ  ಕೆಲಸ ಮಾಡಿದ್ದಾರೆ. ಮೆಚ್ಚುಗೆಗೆ ಅವರು ಅರ್ಹರು ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದರು.

SCROLL FOR NEXT