ದೇಶ

ಮೇ ಅಂತ್ಯಕ್ಕೆ ಕೋವಿಡ್‌-19 ಸೋಂಕು 2ನೇ ಅಲೆಯ ಪ್ರಸರಣ ಇಳಿಮುಖ ಸಾಧ್ಯತೆ: ಖ್ಯಾತ ಲಸಿಕೆ ತಜ್ಞೆ ಗಗನದೀಪ್‌ ಕಂಗ್

Srinivasamurthy VN

ನವದೆಹಲಿ: ಮೇ ತಿಂಗಳ ಮಧ್ಯದಲ್ಲಿ ಅಥವಾ ಮೇ ತಿಂಗಳ ಅಂತ್ಯದಲ್ಲಿ ದೇಶದಲ್ಲಿ ಕೋವಿಡ್‌-19 ಸೋಂಕು 2ನೇ ಅಲೆಯ ಅಬ್ಬರದಲ್ಲಿ ಇಳಿಕೆ ಕಂಡು ಬರಬಹುದು ಎಂದು ಖ್ಯಾತ ಲಸಿಕೆ ತಜ್ಞೆ ಗಗನದೀಪ್‌ ಕಾಂಗ್‌ ಹೇಳಿದ್ದಾರೆ.

ಪ್ರಸ್ತುತ ಭಾರತದಲ್ಲಿ ಅಬ್ಬರಿಸುತ್ತಿರುವ ಕೋವಿಡ್-19 ಸಾಂಕ್ರಾಮಿಕದ 2ನೇ ಅಲೆಯಲ್ಲಿ ದಾಖಲೆ ಪ್ರಮಾಣದ ಸೋಂಕು ಪ್ರಕರಣಗಳು ದಾಖಲಾಗುತ್ತಿದೆ. ಅಂತೆಯೇ ದೈನಂದಿನ ಸಾವಿನ ಪ್ರಕರಣಗಳೂ ಕೂಡ 4 ಸಾವಿರ ಗಡಿಯಲ್ಲಿದ್ದು, ದಿನೇ ದಿನೇ ಚೇತರಿಕೆ ಪ್ರಮಾಣ ಕುಸಿಯುತ್ತಿದೆ. ಇದರ ನಡುವೆಯೇ ಖ್ಯಾತ  ಖ್ಯಾತ ಲಸಿಕೆ ತಜ್ಞೆ ಗಗನದೀಪ್‌ ಕಾಂಗ್‌ ಅವರು ಆಶಾದಾಯಕ ಸುದ್ದಿಯೊಂದನ್ನು ನೀಡಿದ್ದು, ಶೀಘ್ರದಲ್ಲೇ ಕೋವಿಡ್ 2ನೇ ಅಲೆಯ ಅಬ್ಬರ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, 'ಮುಂಬರುವ ದಿನಗಳಲ್ಲಿ ಇನ್ನೂ ಎರಡು ಅಥವಾ ಮೂರು ಬಾರಿ ಅತ್ಯಧಿಕ ಕೋವಿಡ್‌ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದ್ದು, ಆದರೆ, ಈಗ ಕಂಡುಬಂದಿರವಷ್ಟು ತೀವ್ರತೆ ಇರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಈ ಸೋಂಕು ಈಗ ಜಗತ್ತಿನ ಎಲ್ಲ  ಪ್ರದೇಶಗಳಲ್ಲೂ ವ್ಯಾಪಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಕೋವಿಡ್‌ ಪ್ರಕರಣಗಳು ಕಾಣಿಸಿಕೊಂಡಿವೆ. ಕೋವಿಡ್‌ ಲಸಿಕೆಗಳು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಹೀಗಾಗಿ ಲಸಿಕೆ ನೀಡುವುದಕ್ಕೆ ಮತ್ತಷ್ಟೂ ಚುರುಕು ನೀಡುವುದರಿಂದ  ಕೊರೊನಾ ವೈರಸ್‌ ಸೋಂಕಿನ ಪ್ರಸರಣಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಹೇಳಿದ್ದಾರೆ.

ಮೇ ತಿಂಗಳ ಮಧ್ಯಭಾಗದಿಂದ ಅಂತ್ಯದ ವೇಳೆಗೆ ಸೋಂಕಿನ ಪ್ರಮಾಣ ಇಳಿಕೆ
ಇದೇ ವೇಳೆ 2ನೇ ಅಲೆಯ ಅಬ್ಬರ ಮೇ ತಿಂಗಳ ಮಧ್ಯಭಾಗದಿಂದ ಅಂತ್ಯದ ವೇಳೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಂತೆಯೇ ದೇಶದ ಕೆಲ ಭಾಗಗಳಲ್ಲಿ ಕೋವಿಡ್ ಟೆಸ್ಟ್ ಗಳ ಪ್ರಮಾಣ ಕುಸಿಯುತ್ತಿದ್ದು ಇದು ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ಸಾಂಕ್ರಾಮಿಕ ಪ್ರಸ್ತುತ ಕೋವಿಡ್  ಪರೀಕ್ಷೆಗಳಿಗಿಂತಲೂ ಅಧಿಕವಾಗಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಕೊರೋನಾ ವೈರಸ್ ಕೂಡ ಸಾಮಾನ್ಯ ವೈರಸ್ ಜ್ವರವಾಗಿ ಬಿಡಲಿದೆ
ಇದೇ ವೇಳೆ ಇತರೇ ವೈರಲ್ ಫೀವರ್ ಗಳಂತೆ ಕೊರೋನಾ ವೈರಸ್ ಕೂಡ ಸಾಮಾನ್ಯ ಜ್ವರದಂತೆ ಕಾಡಲಿದೆ. ಸೀಸನಲ್ ಆರೋಗ್ಯ ಸಮಸ್ಯೆಗಳಂತೆ ಕೊರೋನಾ ವೈರಸ್ ಕೂಡ ಸಾಮಾನ್ಯವಾಗಲಿದೆ. ಆ ವೇಳೆಗಾಗಲೇ ಜನರಲ್ಲಿ ಸಾಕಷ್ಟು ರೋಗನಿರೋಧಕ ಶಕ್ತಿ ವೃದ್ಧಿಸಲಿದೆ. ಲಸಿಕೆ ಸಾಮರ್ಥ್ಯಗಳೂ ಕೂಡ  ದುಪ್ಪಟ್ಟಾಗಲಿದೆ ಎಂದು ಕಾಂಗ್ ಹೇಳಿದ್ದಾರೆ.  
 

SCROLL FOR NEXT