ದೇಶ

ಕೊರೋನ ಪರಿಸ್ಥಿತಿ: ನಾಲ್ಕು ರಾಜ್ಯಗಳ ಜೊತೆ ಪ್ರಧಾನಿ ಸಮಾಲೋಚನೆ

Nagaraja AB

ನವದೆಹಲಿ: ರಾಜ್ಯಗಳಲ್ಲಿನ ಕೊರೋನ ಸೋಂಕು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ನಾಲ್ಕು ಮುಖ್ಯಮಂತ್ರಿಗಳ ಜೊತೆ ದೂರವಾಣಿಯಲ್ಲಿ ಸಮಾಲೋಚನೆ ನಡೆಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್,  ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರೊಂದಿಗೆ ಕೊರೋನ ಸ್ಥಿತಿ ಕುರಿತ ಮಾಹಿತಿ ಪಡೆದಿಕೊಂಡರು.

ಇದರ ಜೊತೆಗೆ ಕೊರೋನಾ ಭಾದಿತ ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ವಿಶೇಷವೆಂದರೆ, ಮೋದಿಯವರು ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ ಗಳೊಂದಿಗೆ ದೂರವಾಣಿಯಲ್ಲಿ ಮಾತುಕತೆ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಕೊರೋನಾ ವೈರಸ್ ಲಸಿಕೆಗಾಗಿ ಪ್ರತ್ಯೇಕ ಆಪ್ ಅಭಿವೃದ್ಧಿಪಡಿಸಲು ಅನುಮತಿ ಕೋರಿ ಪ್ರಧಾನಿ ಮೋದಿ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್  ಠಾಕ್ರೆ ಕೇಂದ್ರಕ್ಕೆ ಪತ್ರ ಬರೆದ ದಿನವೇ ಅವರಿಗೆ ಕರೆ ಮಾಡಿ ಮಾತನಾಡಿದರು.

ಕೊರೋನ ಸೋಂಕಿನ ಎರಡನೇ ಅಲೆಯಲ್ಲಿ ಮಹಾರಾಷ್ಟ್ರವು ಹೆಚ್ಚು  ಪರಿಣಾಮ ಬೀರಿದ ರಾಜ್ಯವಾಗಿದೆ. ಮುಂಬೈ ಸೇರಿದಂತೆ ಅದರ ಕೆಲವು ನಗರಗಳಲ್ಲಿ ಕೆಲಮಟ್ಟಿಗೆ ಸುಧಾರಣೆ ಕಂಡಿದ್ದರೂ, ರಾಜ್ಯದ ಅನೇಕ ಭಾಗಗಳಲ್ಲಿನ ಪರಿಸ್ಥಿತಿ ಕಳವಳಕಾರಿಯಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 54,000 ಹೊಸ ಕೊರೋನ ಪ್ರಕರಣಗಳು ದಾಖಲಾಗಿವೆ.

ನಂತರ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೋದಿಗೆ ರಾಜ್ಯದಲ್ಲಿನ ಚಿತ್ರಣ ನೀಡಿದರು. ಸೋಂಕು ಪ್ರಕರಣ ಕಡಿಮೆಯಾಗುತ್ತಿರುವ ಬಗ್ಗೆ ಮತ್ತು ಶೀಘ್ರವಾಗಿ ಚೇತರಿಕೆ ಪ್ರಮಾಣ ಹೆಚ್ಚಿಸುವ ಬಗ್ಗೆ ಮಾಹಿತಿ ನೀಡಿದರು.

SCROLL FOR NEXT