ದೇಶ

ಮನೆಮನೆಗೆ ಹೋಗಿ ಲಸಿಕೆ ಹಾಕುವ ಮೂಲಕ ಹಲವರ ಜೀವ ಉಳಿಸಬಹುದಿತ್ತು: ಬಾಂಬೆ ಹೈಕೋರ್ಟ್

Lingaraj Badiger

ಮುಂಬೈ: ಕೇಂದ್ರ ಸರ್ಕಾರವು ಕೆಲ ತಿಂಗಳುಗಳ ಹಿಂದೆಯೇ ಮನೆಮನೆಗೆ ಹೋಗಿ ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ಹಾಕುವ ಆರಂಭಿಸಿದ್ದರೆ ಅನೇಕ ಗಣ್ಯವ್ಯಕ್ತಿಗಳು ಸೇರಿದಂತೆ ಹಲವರ ಜೀವಗಳನ್ನು ಉಳಿಸಬಹುದಿತ್ತು ಎಂದು ಬಾಂಬೆ ಹೈಕೋರ್ಟ್ ಬುಧವಾರ ಹೇಳಿದೆ.",

ಲಸಿಕೆ ಪಡೆಯಲು ಲಸಿಕೆ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದ ಹಿರಿಯ ನಾಗರಿಕರ ಜೀವನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರ ವಿಭಾಗೀಯ ಪೀಠ, ಕೇಂದ್ರ ಸರ್ಕಾರ ಮನೆಮನೆಗೆ ಹೋಗಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಏಕೆ ಪ್ರಾರಂಭಿಸಬಾರದು ಎಂದು ಪ್ರಶ್ನಿಸಿದೆ.

75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಚೇತನ ವ್ಯಕ್ತಿಗಳು ಮತ್ತು ಹಾಸಿಗೆ ಹಿಡಿದ ಅಥವಾ ಗಾಲಿಕುರ್ಚಿಯಲ್ಲಿರುವವರಿಗೆ ಮನೆ-ಮನೆ-ಲಸಿಕೆ ಸೌಲಭ್ಯ ಕೋರಿ ಇಬ್ಬರು ವಕೀಲರಾದ ಧ್ರುತಿ ಕಪಾಡಿಯಾ ಮತ್ತು ಕುನಾಲ್ ತಿವಾರಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿತು.

ತನ್ನ ಹಿಂದಿನ ಏಪ್ರಿಲ್ 22 ರ ಆದೇಶವನ್ನು ಪುನರುಚ್ಚರಿಸಿದ ನ್ಯಾಯಾಲಯ, ಮನೆ-ಮನೆ-ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸದಿರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕು ಎಂದು ಸೂಚಿಸಿದೆ.

"ಮೂರು ವಾರಗಳಾದರೂ ಕೇಂದ್ರ ಸರ್ಕಾರ(ಯೂನಿಯನ್) ತನ್ನ ನಿರ್ಧಾರವನ್ನು ಇನ್ನೂ ನಮಗೆ ತಿಳಿಸಿಲ್ಲ. ಸರ್ಕಾರವು ಯಾವುದಾದರೂ ಒಂದು ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು" ಎಂದು ನ್ಯಾಯಾಲಯ ಹೇಳಿದೆ.

SCROLL FOR NEXT