ದೇಶ

ಕೋವಿಶೀಲ್ಡ್ ಲಸಿಕೆ: ಎರಡು ಡೋಸ್‌ ಗಳ ನಡುವೆ 12 ರಿಂದ 16 ವಾರಗಳ ಅಂತರ ಕಾಯ್ದುಕೊಳ್ಳಲು ತಾಂತ್ರಿಕ ತಜ್ಞರ ಸಮಿತಿ ಶಿಫಾರಸು

Srinivasamurthy VN

ನವದೆಹಲಿ: ಕೋವಿಶೀಲ್ಡ್ ಕೋವಿಡ್ ಲಸಿಕೆಯ ಎರಡು ಡೋಸ್‌ ಗಳ ನಡುವೆ 12 ರಿಂದ 16 ವಾರಗಳ ಅಂತರಕ್ಕೆ ತಾಂತ್ರಿಕ ತಜ್ಞರ ಸಮಿತಿ ಶಿಫಾರಸು ಮಾಡಿದ್ದಾರೆ.

ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಕೋವಿಡ್ ಲಸಿಕೆಗಳಿಗೆ ವ್ಯಾಪಕ ಬೇಡಿಕೆ ಎದುರಾಗಿದ್ದು, ದೇಶದ ಮೂಲೆ ಮೂಲೆಯಲ್ಲೂ ಲಸಿಕೆಗಳಿಗೆ ಕೊರತೆ ಎದುರಾಗಿದೆ. ಇದರ ನಡುವೆಯೇ 'ಕೋವಿಶೀಲ್ಡ್‌' ಕೋವಿಡ್‌ ಲಸಿಕೆಯ ಡೋಸ್‌ಗಳ ನಡುವಿನ ಕಾಲಾವಧಿಯನ್ನು ಹೆಚ್ಚಿಸುವಂತೆ ಲಸಿಕೆ ವಿತರಣೆಗೆ ಸಂಬಂಧಿಸಿದ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ (ರೋಗನಿರೋಧಕ ವಿಭಾಗ)ವು (ಎನ್‌ಟಿಎಜಿಐ) ಶಿಫಾರಸು ಮಾಡಿದೆ.

ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದು 12 ರಿಂದ 16 ವಾರಗಳಲ್ಲಿ ಎರಡನೇ ಡೋಸ್‌ ಹಾಕಿಸಿಕೊಳ್ಳಲು ಸರ್ಕಾರದ ಎನ್‌ಟಿಎಜಿಐ ಸಮಿತಿಯು ಶಿಫಾರಸು ಮಾಡಿದೆ. ದೇಶದಲ್ಲಿ ಕೋವಿಡ್ ಲಸಿಕೆಗಳಿಗೆ ವ್ಯಾಪಕ ಬೇಡಿಕೆ ಎದುರಾದ ಹೊತ್ತಿನಲ್ಲೇ ಕೋವಿಶೀಲ್ಡ್‌ ಲಸಿಕೆಯ ಡೋಸ್‌ಗಳ ನಡುವೆ ಅಂತರ  ಹೆಚ್ಚಿಸಲು ತಜ್ಞರ ಸಮಿತಿ ಅಭಿಪ್ರಾಯ ಪಟ್ಟಿದ್ದು, ಭಾರತ್‌ ಬಯೋಟೆಕ್‌ನ 'ಕೋವ್ಯಾಕ್ಸಿನ್‌' ಲಸಿಕೆಗೆ ಪ್ರಸ್ತುತ ನಿಗದಿ ಪಡಿಸಲಾಗಿರುವ ಅವಧಿಯ ಅಂತರದಲ್ಲಿ ಬದಲಾವಣೆ ಸೂಚಿಸಿಲ್ಲ ಎಂದು ತಿಳಿದುಬಂದಿದೆ.

ಪ್ರಸ್ತುತ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವೆ ನಾಲ್ಕರಿಂದ 8 ವಾರಗಳ ಅಂತರ ನೀಡಲಾಗುತ್ತಿದೆ.

ಅಂತೆಯೇ ಕೋವಿಡ್‌-19 ಸೋಂಕು ದೃಢಪಟ್ಟವರು ಮುಂದಿನ ಆರು ತಿಂಗಳವರೆಗೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವುದನ್ನು ಮುಂದೂಡುವಂತೆ ಸಮಿತಿಯು ಶಿಫಾರಸು ಮಾಡಿದೆ. ಗರ್ಭಿಣಿಯರಿಗೆ ಕೋವಿಡ್‌-19 ಲಸಿಕೆ ಆಯ್ಕೆಗೆ ಅವಕಾಶ ಕಲ್ಪಿಸಬಹುದಾಗಿದೆ. ಗರ್ಭವತಿ ಮಗುವಿಗೆ ಜನ್ಮ ನೀಡಿದ ಬಳಿಕ ಯಾವುದೇ ಸಮಯದಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ ಎಂದೂ ಸಮಿತಿಯು ಶಿಫಾರಸಿನಲ್ಲಿ ತಿಳಿಸಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಎನ್‌ಟಿಎಜಿಐ ತನ್ನ ಶಿಫಾರಸ್ಸುಗಳನ್ನು ರಾಷ್ಟ್ರೀಯ ಲಸಿಕೆ ತಜ್ಞರ ತಂಡಕ್ಕೆ ರವಾನಿಸಿದೆ ಎಂದ ವರದಿಯಲ್ಲಿ ಹೇಳಲಾಗಿದೆ.

SCROLL FOR NEXT