ದೇಶ

ಲಸಿಕೆಗಾಗಿ ರಾಜ್ಯಗಳು ಪರಸ್ಪರ ಕಿತ್ತಾಡುತ್ತಿರುವುದು ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ: ಅರವಿಂದ್ ಕೇಜ್ರಿವಾಲ್

Shilpa D

ನವದೆಹಲಿ: ರಾಜ್ಯ ಸರ್ಕಾರಗಳು ಪರಸ್ಪರ ಸ್ಪರ್ಧಿಸುವಂತೆ ಹಾಗೂ ಕಿತ್ತಾಡುವಂತೆ ಮಾಡಿರುವುದು ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಲಸಿಕೆ ಕೊರತೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ರಾಜ್ಯಗಳ ಪರವಾಗಿ ಕೇಂದ್ರ ಸರ್ಕಾರವೇ ಲಸಿಕೆಯನ್ನು ಖರೀದಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರಾಜ್ಯಗಳು ಪರಸ್ಪರ ಸ್ಪರ್ಧಿಸುವಂತಾಗಿದೆ. ಉತ್ತರ ಪ್ರದೇಶವು ಮಹಾರಾಷ್ಟ್ರ ವಿರುದ್ಧ, ಮಹಾರಾಷ್ಟ್ರವು ಒಡಿಶಾದ ವಿರುದ್ಧ, ಒಡಿಶಾವು ದೆಹಲಿ ವಿರುದ್ಧ ಸ್ಪರ್ಧಿಸುತ್ತಿವೆ. 

ಹಾಗಿದ್ದರೆ ಎಲ್ಲಿದೆ ಭಾರತ? ದೇಶಕ್ಕೆ ಕೆಟ್ಟ ಹೆಸರನ್ನುಂಟು ಮಾಡಿದೆ. ದೇಶದೆಲ್ಲ ರಾಜ್ಯಗಳ ಪರವಾಗಿ 'ಭಾರತ' ಎಂಬ ಒಂದು ರಾಷ್ಟ್ರವಾಗಿ ಲಸಿಕೆಗಳನ್ನು ಖರೀದಿಸಬೇಕಾಗಿದೆ ಎಂದು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಲಸಿಕೆ ಉತ್ಪಾದನಾ ರಾಷ್ಟ್ರಗಳನ್ನು ರಾಜ್ಯಗಳು ಪ್ರತ್ಯೇಕವಾಗಿ ಸಮೀಪಿಸುವ ಬದಲು ಭಾರತ ಸರ್ಕಾರವು ನೇರವಾಗಿ ಸಂಪರ್ಕಿಸಿದರೆ ಹೆಚ್ಚು ಚೌಕಾಶಿ ಮಾಡಬಹುದು. ಅಂತಹ ದೇಶಗಳೊಂದಿಗೆ ಮಾತುಕತೆ ನಡೆಸಲು ಭಾರತ ಸರ್ಕಾರಕ್ಕೆ ಹೆಚ್ಚಿನ ರಾಜತಾಂತ್ರಿಕ ಶಕ್ತಿಯಿದೆ ಎಂದು ಹೇಳಿದ್ದಾರೆ.

ಕೋವಾಕ್ಸಿನ್ ತಯಾರಿಸುವ ಭಾರತ್ ಬಯೋಟೆಕ್ ಕೇಂದ್ರ ಸರ್ಕಾರದ ಅಧಿಕಾರಿಗಳ ಸೂಚನೆಯ ಮೇರೆಗೆ ಲಸಿಕೆಯ "ಹೆಚ್ಚುವರಿ" ಪ್ರಮಾಣವನ್ನು ದೆಹಲಿಗೆ ನೀಡಲು ನಿರಾಕರಿಸಿದೆ ಎಂದು ಸಿಸೋಡಿಯಾ ಬುಧವಾರ ಆರೋಪಿಸಿದ್ದಾರೆ. ಸರ್ಕಾರವು ಏಪ್ರಿಲ್ 26 ರಂದು ತಲಾ 67 ಲಕ್ಷ ಡೋಸ್ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ನೀಡಿತ್ತು ಎಂದು ಅವರು ಹೇಳಿದರು.

SCROLL FOR NEXT