ದೇಶ

ಜನರಿಗೆ 'ಕೋವಿಡ್ ನೆರವು': ದೆಹಲಿ ಪೊಲೀಸರಿಂದ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ವಿಚಾರಣೆ

Lingaraj Badiger

ನವದೆಹಲಿ: ಕೋವಿಡ್ ಸಮಯದಲ್ಲಿ ಜನರಿಗೆ ನೆರವು ನೀಡುವ ಮೂಲಕ ಗಮನ ಸೆಳೆದಿದ್ದ ಭಾರತೀಯ ಯುವ ಕಾಂಗ್ರೆಸ್(ಐವೈಸಿ)​ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ​ಅವರನ್ನು ಶುಕ್ರವಾರ ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಇಂದು ಬೆಳಗ್ಗೆ 11.45ರ ಸುಮಾರಿಗೆ ಯುವ ಕಾಂಗ್ರೆಸ್​ ಕಚೇರಿಗೆ ಆಗಮಿಸಿದ ಪೊಲೀಸರು, ನೀವು ಪರಿಹಾರ ಸಾಮಗ್ರಿಗಳನ್ನು ಹೇಗೆ ವಿತರಣೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು ಎಂದು ಶ್ರೀನಿವಾಸ್ ಅವರು ಹೇಳಿದ್ದಾರೆ.

ಆದರೆ ದೆಹಲಿ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರನ್ನು ವಿಚಾರಣೆ ನಡೆಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕೋವಿಡ್ ಔಷಧಿಗಳು, ಆಕ್ಸಿಜನ್ ಮತ್ತು ಇತರ ವಸ್ತುಗಳ ವಿತರಣೆಯಲ್ಲಿ ಭಾಗಿಯಾಗಿರುವ ರಾಜಕಾರಣಿಗಳ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ನಗರ ಪೊಲೀಸರಿಗೆ ನಿರ್ದೇಶನ ನೀಡಿದೆ ಮತ್ತು ತಪ್ಪು ಮಾಡಿದ್ದರೆ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ರೀನಿವಾಸ್​ ವಿರುದ್ಧ ಕೋರ್ಟ್​ಗೆ ಪಿಐಎಲ್​ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಶ್ರೀನಿವಾಸ್​ ಹಾಗೂ ಅವರ ತಂಡದ ವಿರುದ್ಧ ಸಲ್ಲಿಕೆ ಆಗಿರುವ ಪಿಐಎಲ್​ನಲ್ಲಿ ಕೋವಿಡ್​ ಸಂಬಂಧಿತ ವಸ್ತುಗಳ ಅಕ್ರಮ ದಾಸ್ತಾನು ಹಾಗೂ ವಿತರಣೆ ಬಗ್ಗೆ ದೂರಲಾಗಿದೆ. ಔಷಧಿಗಳ ಅಕ್ರಮ ವಿತರಣೆಯಲ್ಲಿ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ದೂರಲಾಗಿದೆ.

SCROLL FOR NEXT