ದೇಶ

ಹೆಚ್ಚು ಮಾತನಾಡಿದರೆ ನನ್ನ ವಿರುದ್ಧವೂ ದೇಶದ್ರೋಹ ಕೇಸ್ ದಾಖಲಿಸುತ್ತಾರೆ: ಯೋಗಿ ಸರ್ಕಾರ ಕುರಿತು ಮತ್ತೊಬ್ಬ ಬಿಜೆಪಿ ಶಾಸಕ!

Lingaraj Badiger

ಸೀತಾಪುರ: ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​  ಸರ್ಕಾರದ ಬಗ್ಗೆ ಮತ್ತೊಬ್ಬ ಬಿಜೆಪಿ ಶಾಸಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಾನು ಹೆಚ್ಚು ಮಾತನಾಡಿದರೇ ನನ್ನ ವಿರುದ್ಧವೂ ದೇಶದ್ರೋಹದ ಪ್ರಕರಣ ದಾಖಲಿಸುತ್ತಾರೆ ಎಂದು ಬಿಜೆಪಿ ಶಾಸಕ ರಾಕೇಶ್ ರಾಥೋಡ್ ಆತಂಕ ವ್ಯಕ್ತಪಡಿಸಿದ್ದಾರೆ.

"ಶಾಸಕರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನವಿಲ್ಲ. ನಾವು ಮಾಧ್ಯಮಗಳಿಗೆ ಹೆಚ್ಚಿನ ಹೇಳಿಕೆ ನೀಡಿದರೇ, ಮಾತನಾಡಿದರೇ ನಮ್ಮ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಬಹುದು" ಎಂದು ಸೀತಾಪುರ ಶಾಸಕ ರಾಕೇಶ್ ರಾಥೋಡ್ ಹೇಳಿದ್ದಾರೆ. 

ಕಳೆದ ವಾರ ಸೀತಾಪುರದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರವನ್ನು ಮತ್ತೆ ಕಾರ್ಯಗತಗೊಳಿಸುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಶಾಸಕ ರಾಕೇಶ್ ರಾಥೋಡ್, "ನಾನು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇನೆ, ಆದರೆ ಶಾಸಕರಿಗೆ ಯಾವ ಸ್ಥಾನಮಾನವಿದೆ?. ನಾನು ಹೆಚ್ಚು ಮಾತನಾಡಿದರೆ, ನನ್ನ ವಿರುದ್ಧ ದೇಶದ್ರೋಹ ಆರೋಪ ಹೊರಿಸಬಹುದು" ಎಂದು ತಮ್ಮದೇ ಪಕ್ಷದ ವಿರುದ್ಧ ಆರೋಪ ಮಾಡಿದ್ದಾರೆ. ಅದರ ವಿಡಿಯೋ ಕ್ಲಿಪ್ ಈಗ ವೈರಲ್ ಆಗಿದೆ.

ಇನ್ನು ತಮ್ಮದೆ ಪಕ್ಷದ ಸರ್ಕಾರ ಆಡಳಿತ ನಡೆಸುತ್ತಿರುವಾಗ ಶಾಸಕರಾಗಿ ತಮ್ಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, "ಇಲ್ಲಿ ಶಾಸಕರು ತಮ್ಮ ಮನಸ್ಸನ್ನು ಬಿಚ್ಚಿ ಮಾತನಾಡಬಲ್ಲರು ಎಂದು ನಿಮಗೆ ಅನ್ನಿಸುತ್ತಿದೆಯೇ? ನಾನು ಈ ಕುರಿತು ಹಿಂದೆಯೂ ಪ್ರಶ್ನೆ ಮಾಡಿದ್ದೇನೆಂದು ನಿಮಗೆ ತಿಳಿದಿಲ್ಲವೇ" ಎಂದಿದ್ದಾರೆ.

ಮೇ 9ರಂದು ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ಯೋಗಿ ಆದಿತ್ಯನಾಥ್ ನಿರ್ವಹಿಸುತ್ತಿರುವ ರೀತಿಯನ್ನು ಆಡಳಿತರೂಢ ಬಿಜೆಪಿಯ ಮತ್ತೊಬ್ಬ ನಾಯಕ ಪ್ರಶ್ನಿಸಿದ್ದರು.

ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರು ತಮ್ಮ ಬರೇಲಿ ಕ್ಷೇತ್ರದ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗೆ ದೂರು ನೀಡಿದ್ದು, ಅಧಿಕಾರಿಗಳು ಕರೆಗಳನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಸರ್ಕಾರಿ ಆರೋಗ್ಯ ಕೇಂದ್ರಗಳು ರೋಗಿಗಳನ್ನು ಜಿಲ್ಲಾ ಆಸ್ಪತ್ರೆಯಿಂದ ವಾಪಸ್ ಕಳುಹಿಸುತ್ತಿದ್ದಾರೆ ಎಂದು ದೂರಿದ್ದರು.

ಖಾಲಿ ಆಮ್ಲಜನಕ ಸಿಲಿಂಡರ್‌ಗಳ "ದೊಡ್ಡ ಕೊರತೆ" ಇದೆ ಮತ್ತು ಬರೇಲಿಯಲ್ಲಿ ವೈದ್ಯಕೀಯ ಸಲಕರಣೆಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಆದಿತ್ಯನಾಥ್ ಅವರಿಗೆ ಬರೆದ ಪತ್ರದಲ್ಲಿ ದೂರಿದ್ದರು.

SCROLL FOR NEXT