ದೇಶ

ಕೋವಿಶೀಲ್ಡ್ ನಿಂದ ರಕ್ತ ಹೆಪ್ಪುಗಟ್ಟುವಿಕೆ ಅಪಾಯ ಕಡಿಮೆ, ಆದರೆ ಕೋವಾಕ್ಸಿನ್ ನಿಂದ ರಕ್ತ ಹೆಪ್ಪುಗಟ್ಟುವಿಕೆ ಇಲ್ಲ: ತಜ್ಞರ ಸಮಿತಿ

Lingaraj Badiger

ನವದೆಹಲಿ: ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅತ್ಯಂತ ಕಡಿಮೆ ಇದ್ದು, ಕನಿಷ್ಠ ಅಪಾಯ ಅಂದರೆ ಒಂದು ಮಿಲಿಯನ್ ಗೆ 0.61 ರಷ್ಟು ಪ್ರಕರಣಗಳು ವರದಿಯಾಗಿವೆ ಎಂದು ರೋಗನಿರೋಧಕ ನಂತರದ ರಾಷ್ಟ್ರೀಯ ಪ್ರತಿಕೂಲ ಘಟನೆಗಳ(ಎಇಎಫ್‌ಐ) ಸಮಿತಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ತಿಳಿಸಿದೆ.

ಕೋವಿಶೀಲ್ಡ್ ನಿಂದ ಬ್ರಿಟನ್ ಮತ್ತು ಜರ್ಮನ್ ಗಿಂತಲೂ ಭಾರತದಲ್ಲಿ ಅತಿ ಕಡಿಮೆ ಅಪಾಯ ಕಂಡುಬಂದಿದ್ದು, ಬ್ರಿಟನ್ ನಲ್ಲಿ ಅಸ್ಟ್ರಾಜೆನೆಕಾ(ಭಾರತದಲ್ಲಿ ಕೋವಿಶೀಲ್ಡ್) ವ್ಯಾಕ್ಸಿನೇಷನ್ ನಿಂದ ಮಿಲಿಯನ್‌ಗೆ 4 ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳ ಕಂಡುಬಂದಿದ್ದು, ಜರ್ಮನಿಯಲ್ಲಿ ಮಿಲಿಯನ್‌ಗೆ 10 ಪ್ರಕರಣಗಳು ವರದಿಯಾಗಿವೆ ಎಂದು ಸಮಿತಿ ಹೇಳಿದೆ.

ಭಾರತದಲ್ಲಿ ಸುಮಾರು 7.5 ಕೋಟಿ ಡೋಸ್ ಕೋವಿಡ್ ಲಸಿಕೆಗಳ ನಂತರ 684 ಜಿಲ್ಲೆಗಳಿಂದ ಒಟ್ಟು 23,000 ಎಇಎಫ್‌ಐ ವರದಿಯಾಗಿದೆ ಎಂದು ಸಮಿತಿ ತಿಳಿಸಿದೆ. ಈ ಪೈಕಿ 700 ಗಂಭೀರ ಅಥವಾ ತೀವ್ರ ಸ್ವರೂಪದ್ದಾಗಿತ್ತು. 

ಕೋವಾಕ್ಸಿನ್ ಲಸಿಕೆಯಲ್ಲಿ  ಯಾವುದೇ ರಕ್ತ ಹೆಪ್ಪುಗಟ್ಟುವಿಕೆಯ ಪ್ರಕರಣಗಳು ದಾಖಲಾಗಿಲ್ಲ ಎಂದು ಸಮಿತಿ ಹೇಳಿದೆ.

ಭಾರತದಲ್ಲಿ ಇಲ್ಲಿಯವರೆಗೆ ಶೇ. 90 ರಷ್ಟು ಮಂದಿಗೆ ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗಿದ್ದು, ಉಳಿದವರಿಗೆ ಕೋವಾಕ್ಸಿನ್ ನೀಡಲಾಗಿದೆ.

ಭಾರತವು ಈಗ ರಷ್ಯಾದ ಸ್ಪುಟ್ನಿಕ್ ಲಸಿಕೆಗೆ ತುರ್ತು ಬಳಕೆಯ ಅನುಮತಿ ನೀಡಿದೆ ಮತ್ತು ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಮೊದಲ ಡೋಸ್ ನೀಡಲಾಗುತ್ತಿದೆ.

SCROLL FOR NEXT