ದೇಶ

ನಾರದ ಪ್ರಕರಣ: ವಿಚಾರಣೆ ಗುರುವಾರಕ್ಕೆ ಮುಂದೂಡಿದ ಹೈಕೋರ್ಟ್, ಪಶ್ಚಿಮ ಬಂಗಾಳದ ನಾಯಕರಿಗೆ ಜೈಲೇ ಗತಿ

Lingaraj Badiger

ಕೋಲ್ಕತಾ: ನಾರದ ಸ್ಟಿಂಗ್ ಆಪರೇಷನ್ ಪ್ರಕರಣದ ವಿಚಾರಣೆಯನ್ನು ಕೋಲ್ಕತ್ತಾ ಹೈಕೋರ್ಟ್ ಗುರುವಾರಕ್ಕೆ ಮುಂದೂಡಿದ್ದು, ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಪಶ್ಚಿಮ ಬಂಗಾಳದ ಇಬ್ಬರು ಸಚಿವರು, ಓರ್ವ ಶಾಸಕ ಮತ್ತು ಕೋಲ್ಕತ್ತಾದ ಮಾಜಿ ಮೇಯರ್ ನಾಳೆಯವರೆಗೆ ಜೈಲಿನಲ್ಲಿಯೇ ಉಳಿಯಬೇಕಾಗಿದೆ.

ಸಚಿವರಾದ ಸುಬ್ರತಾ ಮುಖರ್ಜಿ ಮತ್ತು ಫಿರ್ಹಾದ್ ಹಕೀಮ್, ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರ ಮತ್ತು ಮಾಜಿ ನಗರ ಮೇಯರ್ ಸೋವನ್ ಚಟರ್ಜಿ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಕರಣದ ವಿಚಾರಣೆಯನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡುವಂತೆ ಕೋರಿ ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ಮತ್ತು ಆರೋಪಿಗಳಿಗೆ ಸಿಬಿಐ ನ್ಯಾಯಾಲಯ ಸೋಮವಾರ ನೀಡಿರುವ ಜಾಮೀನಿಗೆ ಹೈಕೋರ್ಟ್‌ನ ತಡೆಯಾಜ್ಞೆ ವಿಧಿಸಿರುವುದನ್ನು ಮರುಪರಿಶೀಲಿಸುವಂತೆ ಕೋರಿ ಟಿಎಂಸಿ ನಾಲ್ವರು ನಾಯಕರು ಸಲ್ಲಿಸಿದ್ದ ಅರ್ಜಿಯನ್ನು ನಾಳೆಗೆ ಮುಂದೂಡಲಾಗಿದೆ.

ಬಂಧಿತ ನಾಲ್ವರು ನಾಯಕರಿಗೆ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ ಕೆಳ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಸೋಮವಾರ ರಾತ್ರಿ ತಡೆಹಿಡಿದಿದೆ.

ವಿಶೇಷ ನ್ಯಾಯಾಲಯದ ಆದೇಶವನ್ನು ತಡೆಹಿಡಿಯುವುದು ಸೂಕ್ತವೆಂದು ಪರಿಗಣಿಸಲಾಗಿದೆ ಮತ್ತು "ಮುಂದಿನ ಆದೇಶದವರೆಗೆ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಿಕೊಳ್ಳಬೇಕು" ಎಂದು ವಿಭಾಗೀಯ ಪೀಠ ಹೇಳಿದೆ.

SCROLL FOR NEXT