ದೇಶ

ಕರ್ನಾಟಕ, ರಾಜಸ್ಥಾನದ ಬಳಿಕ ಬ್ಲ್ಯಾಕ್ ಫಂಗಸ್ ಅನ್ನು ಅಧಿಸೂಚಿತ ಕಾಯಿಲೆ ಎಂದು ತೆಲಂಗಾಣ ಘೋಷಣೆ

Srinivasamurthy VN

ಹೈದರಾಬಾದ್: ಕರ್ನಾಟಕ, ರಾಜಸ್ಥಾನ ಸರ್ಕಾರಗಳು ಬ್ಲ್ಯಾಕ್ ಫಂಗಸ್ ಸೋಂಕನ್ನು ಅಧಿಸೂಚಿತ ಕಾಯಿಲೆ (epidemic) ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ತೆಲಂಗಾಣ ಸರ್ಕಾರದ ಕೂಡ ಇದೇ ರೀತಿಯ ನಿರ್ಣಯ ಕೈಗೊಂಡಿದೆ.

ತೆಲಂಗಾಣ ಸರ್ಕಾರ ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್ ಫಂಗಸ್ ಸೋಂಕನ್ನು ಅಧಿಸೂಚಿತ ರೋಗವೆಂದು ಘೋಷಿಸಿದ್ದು, ರಾಜ್ಯದಲ್ಲಿ ಯಾವುದೇ ಆಸ್ಪತ್ರೆ ಅಥವಾ ಇತರೆಡೆ ಕಪ್ಪು ಶಿಲೀಂಧ್ರ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಸರ್ಕಾರಕ್ಕೆ ಮಾಹಿತಿ ನೀಡುವಂತೆ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ. ಎಲ್ಲಾ  ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಈ ನಿಯಮಗಳು ಅನ್ವಯವಾಗಲಿದೆ. 1897 ರ ಕೇಂದ್ರ ಸಾಂಕ್ರಾಮಿಕ ಕಾಯ್ದೆಯಲ್ಲಿ ಕಪ್ಪು ಶಿಲೀಂಧ್ರ ಸೋಂಕನ್ನು ಕೂಡ ಸೇರಿಸಲಾಗಿದ್ದು, ಪ್ರತಿದಿನ ಆಯಾ ಆಸ್ಪತ್ರೆಗಳಲ್ಲಿ ನೋಂದಾಯಿಸಲ್ಪಟ್ಟವರು ಮತ್ತು ಕಪ್ಪು ಶಿಲೀಂಧ್ರದ ಲಕ್ಷಣಗಳು ಕಂಡುಬರುವವರು ಆರೋಗ್ಯ ಇಲಾಖೆಗೆ  ವಿವರಗಳನ್ನು ನೀಡಬೇಕಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. 

ಇದರೊಂದಿಗೆ ತೆಲಂಗಾಣ ವೈದ್ಯಕೀಯ ಆರೋಗ್ಯ ಇಲಾಖೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಯಾ ನಿಯಮಾವಳಿಗಳ ಪ್ರಕಾರ ವೈದ್ಯಕೀಯ ಸೇವೆಗಳನ್ನು ಒದಗಿಸಲು ಸೂಚನೆಗಳನ್ನು ನೀಡಿದೆ. ಕಪ್ಪು ಶಿಲೀಂಧ್ರ ಪ್ರಕರಣಗಳನ್ನು ಪ್ರತಿದಿನವೂ ವರದಿ ಮಾಡುವಂತೆ ತೆಲಂಗಾಣ ಆರೋಗ್ಯ ನಿರ್ದೇಶಕ  ಶ್ರೀನಿವಾಸ ರಾವ್ ಅವರು ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂದ್ರ ಸೋಂಕು ಕುರಿತ ತಪಾಸಣೆ, ರೋಗನಿರ್ಣಯ ಮತ್ತು ನಿರ್ವಹಣೆ ಏಕರೂಪವಾಗಿರಬೇಕು ಮತ್ತು MOHFW ಮತ್ತು ICMR  ಮಾರ್ಗಸೂಚಿಗಳಿಗೆ ಅನುಸಾರವಾಗಿರಬೇಕು. ಕಪ್ಪು ಶಿಲೀಂದ್ರ ಸೋಂಕಿಗೆ ಔಷಧಿಗೆ ಅರ್ಜಿ ಸಲ್ಲಿಸಲು ಬಯಸುವವರು ರೋಗಿಯ ವಿವರಗಳೊಂದಿಗೆ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು ಮತ್ತು ಅದನ್ನು ವೈದ್ಯಕೀಯ ಶಿಕ್ಷಣ ಕಚೇರಿಯ ನಿರ್ದೇಶಕರಿಗೆ ಇಮೇಲ್ ಮೂಲಕ ಕಳುಹಿಸಬೇಕು ಎಂದು  ಆದೇಶಿಸಿದ್ದಾರೆ.

ತೆಲಂಗಾಣ ಮಾತ್ರವಲ್ಲದೇ ಆಂಧ್ರಪ್ರದೇಶದಲ್ಲೂ ಕಪ್ಪು ಶಿಲೀಂಧ್ರ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಪ್ರಕಾಶಂ ಜಿಲ್ಲೆ ಮಾರ್ಕಪುರಂನಲ್ಲಿ ಕಪ್ಪು ಶಿಲೀಂದ್ರ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಪಟ್ಟಣದಲ್ಲಿ ಆರು ಕಪ್ಪು ಶಿಲೀಂಧ್ರ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಮಾರ್ಕಪುರಂ  ಕೋವಿಡ್ ಕೇಂದ್ರದ ಉಸ್ತುವಾರಿ ಡಾ.ರಾಂಬಾಬು ಹೇಳಿದ್ದಾರೆ. ಅಂತೆಯೇ ಅನಂತಪುರ ಜಿಲ್ಲೆಯಲ್ಲೂ ಕಪ್ಪು ಶಿಲೀಂಧ್ರ ಹರಡುತ್ತಿದ್ದು, ಜಿಲ್ಲೆಯ ಇಬ್ಬರು ನಿವಾಸಿಗಳಿಗೆ ಇತ್ತೀಚೆಗೆ ಕಪ್ಪು ಶಿಲೀಂಧ್ರ ಇರುವುದು ಪತ್ತೆಯಾಗಿತ್ತು. ವೈದ್ಯರು ಪ್ರಸ್ತುತ ಈ ಕಪ್ಪು ಶಿಲೀಂದ್ರ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ನೀಡುತ್ತಿದ್ದಾರೆ. 

ಏತನ್ಮಧ್ಯೆ, ರಾಜಸ್ಥಾನ ಸರ್ಕಾರ ಈಗಾಗಲೇ ಮ್ಯೂಕಾರ್ಮೈಕೋಸಿಸ್ (ಕಪ್ಪು ಶಿಲೀಂಧ್ರ) ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿತ್ತು. ಕಪ್ಪು ಶಿಲೀಂಧ್ರವನ್ನು ಸಾಂಕ್ರಾಮಿಕ ಎಂದು ಘೋಷಿಸಿ ರಾಜಸ್ಥಾನ ಆರೋಗ್ಯ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಅಖಿಲ್ ಅರೋರಾ ಬುಧವಾರ ಆದೇಶ ಹೊರಡಿಸಿದ್ದಾರೆ.

ಪ್ರಸ್ತುತ ರಾಜಸ್ಥಾನದಲ್ಲಿ 100 ಕ್ಕೂ ಹೆಚ್ಚು ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳಿವೆ. ಆದರೆ, ಇವರೆಲ್ಲರಿಗೂ ಚಿಕಿತ್ಸೆ ನೀಡಲು ಸರ್ಕಾರ ಜೈಪುರದ ಸವಾಯ್ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ವ್ಯವಸ್ಥೆ ಮಾಡಿದೆ. ಮ್ಯೂಕೋರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ರೋಗವೆಂದು ಗುರುತಿಸಲಾಗಿದೆ. ಇದನ್ನು  ರಾಜಸ್ಥಾನ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಕಾಯ್ದೆ 2020 ರ ಅಡಿಯಲ್ಲಿ ರಾಜ್ಯದಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ. 

ಇದು ಕೊರೋನಾ ವೈರಸ್‌ನಿಂದ ಚೇತರಿಸಿಕೊಳ್ಳುವವರಿಗೆ ಅಪಾಯಕಾರಿಯಾಗಿದ್ದು, ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದರೆ ಪ್ರಾಣಾಪಾಯದಿಂದ ಪಾರಾಗಬಹುದು ಎನ್ನಲಾಗಿದೆ. 

SCROLL FOR NEXT