ದೇಶ

ದೆಹಲಿ ಸರ್ಕಾರಕ್ಕೆ ನೇರವಾಗಿ ಕೋವಿಡ್ ಲಸಿಕೆ ಮಾರಾಟ ಮಾಡಲು ಫೈಜರ್, ಮಾಡೆರ್ನಾ ನಿರಾಕರಣೆ!

Lingaraj Badiger

ನವದೆಹಲಿ: ಅಮೆರಿಕದ ಔಷಧಿ ತಯಾರಕ ಸಂಸ್ಥೆಗಳಾದ ಫೈಜರ್ ಮತ್ತು ಮಾಡೆರ್ನಾ ಕೇಂದ್ರದ ಜೊತೆ ನೇರವಾಗಿ ವ್ಯವಹರಿಸಲು ಬಯಸಿದ್ದರಿಂದ ಕೊರೋನಾ ವೈರಸ್ ಲಸಿಕೆಗಳನ್ನು ನೇರವಾಗಿ ದೆಹಲಿ ಸರ್ಕಾರಕ್ಕೆ ಮಾರಾಟ ಮಾಡಲು ನಿರಾಕರಿಸಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ.

"ನಾವು ನೇರವಾಗಿ ಲಸಿಕೆ ಖರೀದಿಗಾಗಿ ಫೈಜರ್ ಮತ್ತು ಮಾಡೆರ್ನಾ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ, ಆದರೆ ಅವರು ನಮಗೆ ಲಸಿಕೆ ನೀಡುವುದಿಲ್ಲ ಮತ್ತು ನೇರವಾಗಿ ಕೇಂದ್ರದೊಂದಿಗೆ ಮಾತನಾಡುತ್ತೇವೆ" ಎಂದು ಹೇಳಿರುವುದಾಗಿ ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಕೇಂದ್ರ ಸರ್ಕಾರ ಈ ಸಂಸ್ಥೆಗಳೊಂದಿಗೆ ಮಾತನಾಡಿ, ಲಸಿಕೆಗಳನ್ನು ಆಮದು ಮಾಡಿಕೊಳ್ಳಬೇಕು ಮತ್ತು ಅವುಗಳನ್ನು ರಾಜ್ಯಗಳಿಗೆ ವಿತರಿಸಬೇಕು ಎಂದು ನಾನು ಕೈಮುಗಿದು ಮನವಿ ಮಾಡುತ್ತೇನೆ" ಎಂದು ದೆಹಲಿ ಸಿಎಂ ಹೇಳಿದ್ದಾರೆ.

ಲಸಿಕೆಗಳನ್ನು ನೇರವಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಲು ಮಾಡೆರ್ನಾ ನಿರಾಕರಿಸಿದೆ ಮತ್ತು ಕೇಂದ್ರದೊಂದಿಗೆ ಮಾತ್ರ ವ್ಯವಹರಿಸುವುದಾಗಿ ಹೇಳಿದೆ ಎಂದು ಪಂಜಾಬ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ ಮಾರನೇ ದಿನ ದೆಹಲಿ ಮುಖ್ಯಮಂತ್ರಿಯವರ ಈ ಹೇಳಿಕೆ ಹೊರಬಿದ್ದಿದೆ.

ಕೋವಿಡ್ ಲಸಿಕೆ ತಯಾರಕ ಮೊಡೆರ್ನಾ ನೇರವಾಗಿ ಪಂಜಾಬ್ ಸರ್ಕಾರಕ್ಕೆ ಲಸಿಕೆ ಕಳುಹಿಸಲು ನಿರಾಕರಿಸಿದೆ. ಅವರ ನೀತಿಯ ಪ್ರಕಾರ ಅವರು ಭಾರತ ಸರ್ಕಾರದೊಂದಿಗೆ ಮಾತ್ರ ವ್ಯವಹರಿಸುತ್ತಾರೆ ಮತ್ತು ಯಾವುದೇ ರಾಜ್ಯ ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳೊಂದಿಗೆ ವ್ಯವಹರಿಸುವುದಿಲ್ಲ ಎಂದು ಪಂಜಾಬ್ ಲಸಿಕೆ ನೋಡಲ್ ಅಧಿಕಾರಿ ವಿಕಾಸ್ ಗರ್ಗ್ ಅವರು ಭಾನುವಾರ ಹೇಳಿದ್ದರು.

SCROLL FOR NEXT