ದೇಶ

ಸಿಬಿಎಸ್ ಇ 12ನೇ ತರಗತಿ ಪರೀಕ್ಷೆ ರದ್ದು ಕೋರಿ ಅರ್ಜಿ: ಮೇ 31ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್ 

Sumana Upadhyaya

ನವದೆಹಲಿ: ಸಿಬಿಎಸ್ ಇ 12ನೇ ತರಗತಿ ಪರೀಕ್ಷೆಯನ್ನು ಕೋವಿಡ್ ಎರಡನೇ ಅಲೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

ಕೇಂದ್ರ ಸರ್ಕಾರ ಪರೀಕ್ಷೆ ನಡೆಸುವುದೇ ಬೇಡವೇ ಎಂಬ ಬಗ್ಗೆ ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಆಧಾರದ ಮೇಲೆ ವಿಚಾರಣೆಯನ್ನು ಬರುವ ಸೋಮವಾರಕ್ಕೆ ಮುಂದೂಡಿದೆ.

ಸಿಬಿಎಸ್ ಇ, ಐಸಿಎಸ್ ಇಯ 12ನೇ ತರಗತಿ ಪರೀಕ್ಷೆಗಳನ್ನು ಈ ವರ್ಷ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ ಎಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಪರೀಕ್ಷೆಗಳನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಇಂದು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎ ಎಂ ಖನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರ ನೇತೃತ್ವದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. 

ಅರ್ಜಿಯಲ್ಲಿ, ಸಿಬಿಎಸ್ ಇ, ಐಸಿಎಸ್ ಇ ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳು 12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶವನ್ನು ನಿರ್ದಿಷ್ಟ ಸಮಯದೊಳಗೆ ಘೋಷಿಸಲು ವಸ್ತುನಿಷ್ಠ ವಿಧಾನವನ್ನು ರೂಪಿಸಬೇಕೆಂದು ಒತ್ತಾಯಿಸಲಾಗಿದೆ.

ಇತ್ತೀಚೆಗೆ 12ನೇ ತರಗತಿಯ ಸುಮಾರು 300 ವಿದ್ಯಾರ್ಥಿಗಳು ಸಹಿಯನ್ನು ಹಾಕಿದ ಪತ್ರವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಎನ್ ವಿ ರಮಣ ಅವರಿಗೆ ಕಳುಹಿಸಿ, ಕೋವಿಡ್-19 ಸಾಂಕ್ರಾಮಿಕದ ನಡುವೆ ಪರೀಕ್ಷೆಯನ್ನು ಭೌತಿಕವಾಗಿ ನಡೆಸುವ ಸಿಬಿಎಸ್ ಇ ನಿರ್ಧಾರವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದರು.

ಅದರ ಬದಲಾಗಿ ವಿದ್ಯಾರ್ಥಿಗಳಿಗೆ ಬದಲಿ ಮೌಲ್ಯಮಾಪನ ಯೋಜನೆ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಪತ್ರದಲ್ಲಿ ವಿದ್ಯಾರ್ಥಿಗಳು ಒತ್ತಾಯಿಸಿದ್ದರು.

ಇತ್ತೀಚೆಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ 12ನೇ ತರಗತಿಯವರಿಗೆ ಸದ್ಯದಲ್ಲಿಯೇ ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರಕ್ಕೆ ಬರಲಾಗಿತ್ತು. ಇದೇ 30ರಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ 12ನೇ ತರಗತಿ ಸಿಬಿಎಸ್ ಇ, ಐಸಿಎಸ್ ಇ ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆಯಿದೆ.

SCROLL FOR NEXT