ದೇಶ

ದೆಹಲಿಯಲ್ಲಿ ಕೊರೋನಾ ಪ್ರಮಾಣ ಇಳಿಕೆ; ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆ ಆರಂಭ: ಸಿಎಂ ಅರವಿಂದ್ ಕೇಜ್ರಿವಾಲ್

Srinivasamurthy VN

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕಿನ ಅಬ್ಬರ ಗಣನೀಯವಾಗಿ ತಗ್ಗಿರುವ ಹಿನ್ನಲೆಯಲ್ಲಿ ಇದೇ ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಜ್ರಿವಾಲ್ ಅವರು, ಕಳೆದ 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 1100 ಸೋಂಕು ಪ್ರಕರಣಗಳು ಮಾತ್ರ ವರದಿಯಾಗಿದ್ದು, ಆ ಮೂಲಕ ದೆಹಲಿಯ ಸೋಂಕು ಸಕಾರಾತ್ಮಕದರ ಶೇ.1.5ಕ್ಕೆ ಇಳಿಕೆಯಾಗಿದೆ. ಹೀಗಾಗಿ ಹಾಲಿ ಲಾಕ್ ಡೌನ್ ಸೋಮವಾರಕ್ಕೆ  ಅಂತ್ಯವಾಗಲಿದ್ದು, ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ. ಸೋಮವಾರ ಬೆಳಗ್ಗೆ 5 ಗಂಟೆಗೆ ಲಾಕ್ ಡೌನ್ ಅಂತ್ಯವಾಗಲಿದ್ದು, ಪ್ರಮುಖವಾಗಿ ಅನ್ ಲಾಕ್ ಪ್ರಕ್ರಿಯೆ ಮೊದಲ ಭಾಗವಾಗಿ ಕಟ್ಟಡ ನಿರ್ಮಾಣ ಚಟುವಟಿಕೆ ಮತ್ತು ಕಾರ್ಖಾನೆಗಳನ್ನು ಮೊದಲು ತೆರೆಯಲಾಗುತ್ತದೆ. ಇದರಿಂದ  ದಿನಗೂಲಿ ಕಾರ್ಮಿಕರಿಗೆ ನೆರವಾಗುತ್ತದೆ ಎಂದು ಹೇಳಿದರು.

ತಗ್ಗಿದ ಕೊರೋನಾ ಅ್ಬಬರ; ಗುಣಮುಖರ ಪ್ರಮಾಣ ದ್ವಿಗುಣ
ಕೊರೋನಾ ಎರಡನೇ ಅಲೆಯ ಪ್ರಭಾವ ರಾಷ್ಟ್ರ ರಾಜಧಾನಿಯಲ್ಲಿ ಕ್ರಮೇಣ ಇಳಿಮುಖವಾಗುತ್ತಿದೆ. ಸಕಾರಾತ್ಮಕ ದರ ಪ್ರಸ್ತುತ ಶೇ.2.5 ರಷ್ಟಿದೆ. ಆದರೂ, ಈ ಸೋಂಕನ್ನು ಸಂಪೂರ್ಣವಾಗಿ ನಿರ್ಮೂಲನೆ ಗೊಳಿಸುವ ಸಲುವಾಗಿ ಮೇ 31ರ ಬೆಳಗ್ಗೆ 5 ಗಂಟೆಯ ವರೆಗೆ ಲಾಕ್​ಡೌನ್​ ಅನ್ನು ವಿಸ್ತರಿಸಲಾಗಿದೆ. ಇದೀಗ  ಕೋವಿಡ್​ನಿಂದ ಗುಣಮುಖರಾಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ.  ದೈನಂದಿನ ವರದಿಯಾಗುವ ಪ್ರಕರಣಗಳಿಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿದೆ.

ಒಟ್ಟಾರೆ ಈಗ ಗುಣಮುಖರಾಗುವವರ ಸಂಖ್ಯೆ ಪ್ರತಿದಿನವೂ ವರದಿಯಾಗುತ್ತಿರುವ ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು ಮೀರಿದೆ. ಚೇತರಿಕೆ ದರವು  ಈಗ ಶೇ. 85.6 ರಿಂದ ಶೇ. 90% ಕ್ಕೆ ಏರಿದೆ. ಇದು ಸಕಾರಾತ್ಮಕ ಸೂಚನೆ ಎಂದು ದೆಹಲಿ ಆರೋಗ್ಯ ಸಚಿವಾಲಯ ತಿಳಿಸಿದೆ.

3ನೇ ಅಲೆಗೆ ಸಿದ್ಧತೆ
"ಎರಡನೇ ಕೋವಿಡ್​ ಅಲೆಯ ಬೆನ್ನಿಗೆ ಮೂರನೇ ಅಲೆಯೂ ಭಾರತ ಮತ್ತು ದೆಹಲಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ ಹೊಸ ಆಮ್ಲಜನಕ ಸ್ಥಾವರಗಳು ಮತ್ತು ಐಸಿಯು ಹಾಸಿಗೆಗಳನ್ನು ಸ್ಥಾಪಿಸುವುದು ಸೇರಿದಂತೆ ಆರೋಗ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಮಾಡಲು ಅಧಿಕಾರಿಗಳು ಹಗಲು, ರಾತ್ರಿ  ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ರೀತಿಯ ಪ್ರವೃತ್ತಿಯೊಂದಿಗೆ ಪ್ರಕರಣಗಳು ಇಳಿಮುಖವಾಗುತ್ತಿದ್ದರೆ, ಮೇ 31 ರಿಂದ ಹಂತ ಹಂತವಾಗಿ ಲಾಕ್‌ಡೌನ್ ಅನ್ನು ಸಡಿಲಿಸಲಾಗುವುದು" ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

"ನಾನು ಅನೇಕ ತಜ್ಞರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಿದ್ದೇನೆ.  ಎಲ್ಲರೂ ಇನ್ನೂ ಒಂದು ವಾರದವರೆಗೆ ಲಾಕ್​ಡೌನ್ ವಿಸ್ತರಿಸುವ ಕುರಿತು ಒಲವು ತೋರಿಸಿದ್ದರು. ಆದ್ದರಿಂದಲೇ ಮೇ.31ರ ವರೆಗೆ ಲಾಕ್​ಡೌನ್ ಅನ್ನು ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸೋಂಕು ಮತ್ತಷ್ಟು ಹೆಚ್ಚಾಗದಂತೆ ತಡೆಯುವ ಸಲುವಾಗಿ ಲಾಕ್​ಡೌನ್ ಅಗತ್ಯ ಇದೆ. ಈ ನಡುವೆ ಜನರಿಗೆ ಕೊರೋನಾ  ಲಸಿಕೆ ನೀಡುವ ಅಗತ್ಯವಿದ್ದು, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಲಸಿಕೆಗಳು ಲಭ್ಯವಾದ ತಕ್ಷಣ 18-44 ವಯಸ್ಸಿನ ಎಲ್ಲಾ ಯುವಕರಿಗೂ ಲಸಿಕೆಯನ್ನು ನೀಡಲಾಗುವುದು" ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

SCROLL FOR NEXT