ದೇಶ

ಹಿಮಾಚಲ ಉಪ ಚುನಾವಣೆ ಫಲಿತಾಂಶ: ಎಲ್ಲಾ 4 ಸ್ಥಾನಗಳಲ್ಲೂ ಕಾಂಗ್ರೆಸ್‌ ಗೆಲುವು, ಆಡಳಿತರೂಢ ಬಿಜೆಪಿಗೆ ತೀವ್ರ ಮುಖಭಂಗ

Lingaraj Badiger

ಶಿಮ್ಲಾ: ಹಿಮಾಚಲ ಪ್ರದೇಶದ ಒಂದು ಲೋಕಸಭಾ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.

ಮಂಡಿ ಲೋಕಸಭಾ ಕ್ಷೇತ್ರ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳಾದ ಅರ್ಕಿ, ಫತೇಪುರ್ ಮತ್ತು ಜುಬ್ಬಲ್-ಕೋಟ್‌ಖಾಯ್ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರಿಗೆ ಪ್ರತಿಷ್ಠೆಯಾಗಿದ್ದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಗೇಡಿಯರ್ ಖುಶಾಲ್ ಠಾಕೂರ್ (ನಿವೃತ್ತ) ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಸಿಂಗ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. 

2019 ರಲ್ಲಿ 3.98 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಎರಡು ಬಾರಿ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರ ನಿಧನದಿಂದ ತೆರವಾಗಿದ್ದ ಮಂಡಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು.

ಆರ್ಕಿ, ಜುಬ್ಬಲ್-ಕೋಟ್‌ಖೈ ಮತ್ತು ಫತೇಪುರ್ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

SCROLL FOR NEXT