ದೇಶ

ಸರ್ಕಾರದ ಕಾರ್ಯನಿರ್ವಹಣೆಗೆ ಸಿಧು ಅಡ್ಡಿ, ತಪ್ಪು ಮಾಹಿತಿ ಹರಡುತ್ತಿದ್ದಾರೆ: ಪಂಜಾಬ್ ಎಜಿ ಎಪಿಎಸ್ ಡಿಯೋಲ್

Lingaraj Badiger

ಚಂಡೀಗಢ: ಪಂಜಾಬ್ ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ಶನಿವಾರ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರು ರಾಜ್ಯ ಸರ್ಕಾರ ಮತ್ತು ತಮ್ಮ ಕಚೇರಿಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಸಿಧು ರಾಜಕೀಯ ಲಾಭ ಪಡೆಯಲು ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ ಎಂದು ದೂರಿದ್ದಾರೆ.

ಸಿಧು ಅವರು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಹಿಂತೆಗೆದುಕೊಂಡ ಮಾರನೇ ದಿನವೇ ಡಿಯೋಲ್ ಅವರು ಈ ಆರೋಪ ಮಾಡಿದ್ದಾರೆ. ಆದರೆ ಎಜಿ ಸ್ಥಾನದಿಂದ ಡಿಯೋಲ್ ಅವರನ್ನು ತೆಗೆದುಹಾಕುವವರೆಗೆ ಮತ್ತು ಹೊಸ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ)ರ ನೇಮಕಕ್ಕಾಗಿ ಸಮಿತಿ ರಚಿಸುವವರೆಗೆ ತಾವು ಮತ್ತೆ ಅಧಿಕಾರ ವಹಿಸಿಕೊಳ್ಳುವುದಿಲ್ಲ ಎಂದು ಸಿಧು ಹೇಳಿದ್ದಾರೆ.

ಡಿಯೋಲ್ ನೇಮಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಸಿಧು ಅವರು ಕಳೆದ ಸೆಪ್ಟೆಂಬರ್ 28 ರಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

‘‘ಈಗ ನವಜೋತ್ ಸಿಂಗ್ ಸಿಧು ಅವರು ರಾಜ್ಯ ಸರ್ಕಾರ ಮತ್ತು ಅಡ್ವೊಕೇಟ್ ಜನರಲ್ ಕಚೇರಿಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದಾರೆ’’ ಎಂದು ಎಜಿ ಡಿಯೋಲ್ ಅವರು ಗಂಭೀರ ಆರೋಪ ಮಾಡಿದ್ದಾರೆ.

"ನವಜೋತ್ ಸಿಂಗ್ ಸಿಧು ಅವರು ರಾಜಕೀಯ ಲಾಭ ಪಡೆಯಲು ತಮ್ಮ ರಾಜಕೀಯ ಸಹೋದ್ಯೋಗಿಗಳ ಬಳಿ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ. "ಸಾಂವಿಧಾನಿಕ ಕಚೇರಿಯಲ್ಲಿ ರಾಜಕೀಯ ಮಾಡುವ ಮೂಲಕ ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಪಂಜಾಬ್‌ನಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ಹಾಳು ಮಾಡಲು ಪಟ್ಟಭದ್ರ ಹಿತಾಸಕ್ತಿಗಳಿಂದ ಸಂಘಟಿತ ಪ್ರಯತ್ನ ನಡೆಯುತ್ತಿದೆ ಎಂದು ಪಂಜಾಬ್‌ನ ಅಡ್ವೊಕೇಟ್ ಜನರಲ್" ಹೇಳಿದ್ದಾರೆ.

SCROLL FOR NEXT