ದೇಶ

ರೈತರಿಗೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲೀಕ್ ಬೆಂಬಲ; ಕೇಂದ್ರದ ಸೆಂಟ್ರಲ್ ವಿಸ್ಟಾ ಯೋಜನೆ ಬಗ್ಗೆ ಟೀಕೆ!

Srinivas Rao BV

ಜೈಪುರ: ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲೀಕ್ ನ.07 ರಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ರೈತರ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿರುವುದೂ ಅಲ್ಲದೇ ಸೆಂಟ್ರಲ್ ವಿಸ್ಟಾ ಯೋಜನೆಯನ್ನೂ ಸಹ ಟೀಕಿಸಿದ್ದು, ತಾವು ರಾಜ್ಯಪಾಲ ಹುದ್ದೆಯನ್ನು ತೊರೆಯುವುದಕ್ಕೂ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.

ದೆಹಲಿ ನಾಯಕರ ನಡೆಯನ್ನು ಕಟುವಾಗಿ ಟೀಕಿಸಿರುವ ಸತ್ಯಪಾಲ್ ಮಲೀಕ್, ಒಂದು ನಾಯಿ ಸತ್ತರೂ ದೆಹಲಿ ನಾಯಕರು ಸಂತಾಪ ಸೂಚಿಸುತ್ತಾರೆ. ಆದರೆ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತರ ಪೈಕಿ 600 ಮಂದಿ ರೈತರು ಮೃತಪಟ್ಟಾಗ ಮರುಗಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯನ್ನು ಉಲ್ಲೇಖಿಸಿರುವ ಸತ್ಯಪಾಲ್ ಮಲೀಕ್, ಸಿಖ್ ಸಮುದಾಯವನ್ನು ಕೆಣಕಬೇಡಿ ಎಂದು ಸಲಹೆ ನೀಡಿದ್ದಾರೆ.

ಸರ್ಕಾರದಲ್ಲಿರುವವರ ಪೈಕಿ ರೈತರ ಪರವಾಗಿರುವವರೂ ಇದ್ದಾರೆ, ಆದರೆ ಒಂದಿಬ್ಬರು ಮಾತ್ರ ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಮಲೀಕ್ ಆರೋಪಿಸಿದ್ದಾರೆ.

ಮೇಘಾಲಯಕ್ಕೆ ರಾಜ್ಯಪಾಲಾಗಿ ನಿಯುಕ್ತಿಗೊಳ್ಳುವುದಕ್ಕೂ ಮುನ್ನ ಸತ್ಯಪಾಲ್ ಮಲೀಕ್ ಮೋದಿ ಆಡಳಿತಾವಧಿಯಲ್ಲೇ ಜಮ್ಮು-ಕಾಶ್ಮೀರ, ಗೋವಾಗಳಲ್ಲಿ ರಾಜ್ಯಪಾಲರಾಗಿದ್ದರು. ಈಗ ಮೋದಿ ಸರ್ಕಾರವನ್ನು ನೇರಾನೇರವಾಗಿ ಟೀಕಿಸುತ್ತಿದ್ದಾರೆ.

ಅವರು ಜೈಪುರದ ಜಾಟ್ ಸಮುದಾಯವನ್ನುದ್ದೇಶಿಸಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ದೆಹಲಿ ನಾಯಕರನ್ನು ಟಾರ್ಗೆಟ್ ಮಾಡಿದ್ದಕ್ಕಾಗಿ ತಾವು ರಾಜ್ಯಪಾಲರ ಹುದ್ದೆ ಕಳೆದುಕೊಳ್ಳಬೇಕಾಗಿಬಂದರೆ ಅದಕ್ಕೂ ಹಿಂಜರಿಯುವುದಿಲ್ಲ ಎಂದು ಮಲೀಕ್ ಹೇಳಿದ್ದಾರೆ.

ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಬರಿಗೈಲಿ ವಾಪಸ್ ತೆರಳುವುದಿಲ್ಲ, ಪಟ್ಟು ಹಿಡಿದಿದ್ದನ್ನು ಸಾಧಿಸಿಯೇ ವಾಪಸ್ ತೆರಳುತ್ತಾರೆ ಎಂದು ಮಲೀಕ್ ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT