ದೇಶ

ಚೆನ್ನೈನಲ್ಲಿ ಭಾರಿ ಮಳೆ-ಗಾಳಿ ಅವಾಂತರ: ಸಂಜೆ 6 ರವರೆಗೂ ವಿಮಾನಗಳ ಆಗಮನ ರದ್ದು

Srinivasamurthy VN

ಚೆನ್ನೈ: ನೆರೆ ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವ್ಯಾಪಕ ಅನಾನುಕೂಲ ಉಂಟಾಗಿದ್ದು, ಇದೀಗ ಚೆನ್ನೈನಲ್ಲಿ ಭಾರಿ ಮಳೆ ಮತ್ತು ಗಾಳಿ ಪರಿಣಾಮ ಸಂಜೆ 6ರವರೆಗೂ ವಿಮಾನಗಳ ಆಗಮನವನ್ನು ರದ್ದು ಮಾಡಲಾಗಿದೆ.

ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಚೆನ್ನೈ ವಿಮಾನ ನಿಲ್ದಾಣವು ಮಧ್ಯಾಹ್ನ 1.15 ರಿಂದ ಸಂಜೆ  6 ರವರೆಗೆ ಆಗಮಿಸುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದ್ದು, ನಿರ್ಗಮನವು ನಿಗದಿತವಾಗಿ ಮುಂದುವರಿಯುತ್ತದೆ ಎಂದು ವಿಮಾನ ನಿಲ್ದಾಣವು ಇಂದು ಮಧ್ಯಾಹ್ನ ಟ್ವೀಟ್ ಮಾಡಿದೆ. ಅಂತೆಯೇ 'ಪ್ರಯಾಣಿಕರ ಸುರಕ್ಷತೆಯ ಅಂಶ ಹಾಗೂ  ಗಾಳಿಯ ತೀವ್ರತೆಯನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಡಾ.ಕುಮಾರ್ ತಿಳಿಸಿದ್ದಾರೆ.    

ಈಗಾಗಲೇ ಚೆನ್ನೈನಲ್ಲಿ ಇಳಿಯಬೇಕಿದ್ದ ವಿಮಾನಗಳನ್ನು ಬೇರೆ ನಿಲ್ದಾಣಗಳಿಗೆ ರವಾನಿಸಲಾಗಿದ್ದು, ಕೇವಲ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳನ್ನು ರದ್ದು ಮಾಡಲಾಗಿದೆ. ನಿಲ್ದಾಣಗದಲ್ಲಿ ಪ್ರಯಾಣಿಕರು ಪ್ರವಾಹದಲ್ಲಿ ನಿಲ್ಲದಂತೆ ತಡೆಯುವ ಉದ್ದೇಶದಿಂದ ವಿಮಾನಗಳ ಟೇಕ್ ಆಫ್ ಗೆ ಅನುಮತಿ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. 

ಇನ್ನು ಇಂದು ರಾತ್ರಿ ಕೂಡ ವ್ಯಾಪಕ ಮಳೆಯಾಗುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಸಂಜೆ 5ರ ಬಳಿಕ ವಿಮಾನ ಸಂಚಾರ ಆರಂಭವಾಗುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಈಗಾಗಲೇ ಸಾಕಷ್ಟು ವಿಮಾನಗಳ ಪ್ರಯಾಣ ರದ್ದಾಗಿದ್ದು, ಮತ್ತೆ ಕೆಲವು ಪ್ರಯಾಣಗಳನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 

SCROLL FOR NEXT