ದೇಶ

ರಾಜ್ಯ ಪೊಲೀಸರಿಗೆ 'ಅವಮಾನ': ಕೇಂದ್ರದ ಬಿಎಸ್‌ಎಫ್ ಆದೇಶದ ವಿರುದ್ಧ ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

Lingaraj Badiger

ಚಂಡೀಗಢ: ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿರುವ ಕೇಂದ್ರ ಸರ್ಕಾರದ ಅಧಿಸೂಚನೆಯ ವಿರುದ್ಧ ಪಂಜಾಬ್ ವಿಧಾನಸಭೆ ಗುರುವಾರ ನಿರ್ಣಯ ಅಂಗೀಕರಿಸಿದೆ ಮತ್ತು ಇದು ರಾಜ್ಯ ಪೊಲೀಸರಿಗೆ "ಅವಮಾನ" ಎಂದು ಕರೆದಿದೆ. ಅಲ್ಲದೆ ಅಧಿಸೂಚನೆ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ.

ಇಂದು ರಾಜ್ಯ ವಿಧಾನಸಭೆಯಲ್ಲಿ ಕೇವಲ ಇಬ್ಬರು ಬಿಜೆಪಿ ಶಾಸಕರ ಅನುಪಸ್ಥಿತಿಯಲ್ಲಿ ಕೇಂದ್ರದ ಆದೇಶವನ್ನು "ತಿರಸ್ಕರಿಸುವ" ನಿರ್ಣಯವನ್ನು ಸದನ ಸರ್ವಾನುಮತದಿಂದ ಅಂಗೀಕರಿಸಿತು.

ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಅಂತರಾಷ್ಟ್ರೀಯ ಗಡಿಯಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ 15 ಕಿಲೋಮೀಟರ್‌ ವ್ಯಾಪ್ತಿಯನ್ನು 50 ಕಿಮೀ ರವರೆಗೆ ವಿಸ್ತರಿಸಿ, ಈ ಪ್ರದೇಶದಲ್ಲಿ ಶೋಧ, ವಶಪಡಿಸಿಕೊಳ್ಳುವಿಕೆ ಮತ್ತು ಬಂಧಿಸುವ ಅಧಿಕಾರವನ್ನು ಗಡಿ ಕಾವಲು ಪಡೆಗೆ ನೀಡಲು ಕೇಂದ್ರ ಸರ್ಕಾರ ಕಳೆದ ತಿಂಗಳು ಬಿಎಸ್‌ಎಫ್ ಕಾಯ್ದೆಗೆ ತಿದ್ದುಪಡಿ ತಂದಿದೆ.

ಕೇಂದ್ರದ ಈ ತಿದ್ದುಪಡಿ ವಿರುದ್ಧ ಪಂಜಾಬ್ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಅವರು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು.

"ಪಂಜಾಬ್ ಹುತಾತ್ಮರ ನಾಡು... ಅವರು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನುಕರಣೀಯ ತ್ಯಾಗ ಮಾಡಿದ್ದಾರೆ".
"ಪಂಜಾಬ್ ಪೊಲೀಸರು ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಅಪಾರ ಕೊಡುಗೆ ನೀಡಿದ ವಿಶಿಷ್ಟ ದೇಶಭಕ್ತ ಶಕ್ತಿಯಾಗಿದೆ. ಭಾರತದ ಸಂವಿಧಾನದ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಮತ್ತು ಈ ಉದ್ದೇಶಕ್ಕಾಗಿ ಪಂಜಾಬ್ ಸರ್ಕಾರ ಸಂಪೂರ್ಣ ಸಮರ್ಥವಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

SCROLL FOR NEXT